* ಆಹಾರದಲ್ಲಿ ಮಾದಕ ವಸ್ತು ಬೆರೆಸಿ ದರೋಡೆ * ಘಟನೆ ನಡೆದು ಒಂಭತ್ತು ದಿನಗಳ ಬಳಿಕ ಸೆರೆ
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಜಮ್ ನಗರ ಎಕ್ಸ್ ಪ್ರೆಸ್ ರೈಲಿನಲ್ಲಿ ಮತ್ತು ಬರುವ ಆಹಾರ ಮತ್ತು ಪಾನೀಯ ನೀಡಿ ತನ್ನನ್ನು ದರೋಡೆಗೈದ ನಾಲ್ವರ ಪೈಕಿ ಒಬ್ಬನನ್ನು ಸೆರೆಹಿಡಿದು ಸಾಹಸ ಮೆರೆದು ಪೊಲೀಸರಿಗೊಪ್ಪಿಸಿದ ಘಟನೆ ಮುಂಬಯಿಯಲ್ಲಿ ನಡೆದಿದೆ.
ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಆಗಿರುವ ಪನ್ವೇಲ್ ನಿವಾಸಿ ರಾಜೇಶ್ ಕುಲಾಲ್ (31ವರ್ಷ) ಶೌರ್ಯ ಮೆರೆದು ದರೋಡೆಕೋರನನ್ನು ಸೆರೆಹಿಡಿದ ಯುವಕ. ಕಳೆದ ಡಿಸೇಂಬರ್ ೨೯ ರಂದು ರಾಜೇಶ್ ಕುಲಾಲ್ ಅವರು ಜಮ್ ನಗರ್ ಎಕ್ಸ್ ಪ್ರೆಸ್ ರೈಲ್ ಮೂಲಕ ಮಂಗಳೂರಿಗೆ ಪ್ರಯಾಣಿಸಲು ನಿರ್ಧರಿಸಿದ್ದರು. ಅಂದು ಟಿಕೆಟ್ ಸಿಗದೇ ಇರುವ ಕಾರಣ ಸಾಮಾನ್ಯ ಬೋಗಿಯಲ್ಲಿ ಪ್ರಯಾಣ ಬೆಳೆಸಿದ್ದರು.
ಅವರಿಗೆ ಗೋವಾ ರತ್ನಗಿರಿ ಬಳಿಕ ರೈಲಿನ ಸೀಟು ದೊರೆತಿತ್ತು. ಈ ಸಂದರ್ಭ ತನ್ನ ಬಳಿ ಕೂತಿದ್ದ ಹಿರಿಯ ವ್ಯಕ್ತಿಯೊಬ್ಬರು ಕಿಟಕಿ ಬದಿಯ ಸೀಟಿನ ಕುರಿತಂತೆ ಮಾತುಕತೆ ಆರಂಭಿಸಿದ್ದರು. ಆ ಬಳಿಕ ತುಂಬಾ ಆತ್ಮೀಯರಂತೆ ವರ್ತಿಸಿದ್ದು, ತನ್ನ ಕುಟುಂಬದ ಸದಸ್ಯರ ಫೋಟೋ-ವೀಡಿಯೋ ತೋರಿಸಿ ಪರಿಚಯಿಸಿದ್ದಲ್ಲದೆ ಮುಂಬರುವ ಲೋಕಸಭಾ ಚುನಾವಣೆ ಕುರಿತು ವಿಚಾರ ವಿನಿಮಯ ನಡೆಸಿದ್ದರು. ಸ್ವಲ್ಪ ಸಮಯದ ಬಳಿಕ ಮತ್ತೊಂದು ಕಂಪಾರ್ಟ್ ಮೆಂಟಿನಲ್ಲಿದ್ದ ತನ್ನ ಗೆಳೆಯರನ್ನು ಭೇಟಿ ಮಾಡಿ ಬರುವುದಾಗಿ ತಿಳಿಸಿದ ಅವರು, ವಾಪಸಾಗುವ ವೇಳೆ ಇತರ ಮೂವರನ್ನು ತನ್ನ ಜೊತೆ ಕರೆತಂದಿದ್ದರು. ಸಂಜೆ ಆರು ಗಂಟೆ ಸಮಯ ತಾವು ತಂದಿದ್ದ ಆಹಾರ ಮತ್ತು ಪಾನೀಯ ನೀಡಿದ್ದು, ಅದರಲ್ಲಿ ಸ್ವಲ್ಪವೇ ಸೇವಿಸಿದ್ದರು. ಆ ಬಳಿಕ ಮಂಪರು ಕವಿದಂತಾಗಿ ಗಾಢ ನಿದ್ರೆಗೆ ಜಾರಿದ ಅವರಿಗೆ ಮಂಗಳೂರು ತಲುಪಿದ ಬಳಿಕ ಎಚ್ಚರವಾಗಿತ್ತು. ಈ ಸಂದರ್ಭ ಅವರ ಬಳಿ ಇದ್ದ 15 ಸಾವಿರ ರೂ. ಹಣ, ಎರಡು ಮೊಬೈಲ್ ಸೆಟ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡನ್ನು ಆ ನಾಲ್ವರು ದೋಚಿ ಪರಾರಿಯಾಗಿದ್ದು, ಗಮನಕ್ಕೆ ಬಂದಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ತನ್ನ ಮೊಬೈಲ್ ಕಳೆದುಕೊಂಡಿದ್ದರಿಂದ ಮಾಹಿತಿ ನೀಡಲು ಮನೆ ಮಂದಿಯ ನಂಬರ್ ಸಿಗದೇ ಪರದಾಡಿದ ಅವರು, ಕೊನೆಗೂ ತನ್ನ ಮಾವನ ನಂಬರ್ ನೆಪನಾಗಿ ವಿಷಯ ತಿಳಿಸಿದ್ದರು. ಬಿದ್ದು ಎದೆಯ ಎಲುಬಿಗೆ ಏಟಾಗಿದ್ದು ಮಾತ್ರವಲ್ಲದೆ ವಿಷಾಹಾರ ಸೇವಿಸಿದ ಪರಿಣಾಮ ಅನಾರೋಗ್ಯಕ್ಕೀಡಾದ ಅವರು ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಹೊಂದಲು ಮೂರು ದಿನ ತಗುಲಿತ್ತು.
ಮತ್ತೆ ಮುಂಬಯಿಗೆ ತೆರಳಿದ್ದ ಅವರು ಈ ಘಟನೆ ನಡೆದು ಒಂಭತ್ತು ದಿನಗಳ ಬಳಿಕ ತನ್ನನ್ನು ರೈಲಿನಲ್ಲಿ ದೋಚಿದ ನಾಲ್ವರ ಪೈಕಿ ಮೂವರನ್ನು ಅಂಧೇರಿ ಲೋಕಲ್ ರೈಲಿನಲ್ಲಿ ಗುರುತಿಸಿ ಪತ್ತೆ ಹಚ್ಚಿದ್ದು, ಇವರನ್ನು ಸೆರೆ ಹಿಡಿಯಲು ಸಾಹಸ ಮೆರೆದರು. ಈ ಸಂದರ್ಭ ಇಬ್ಬರು ರೈಲಿನಿಂದ ಜಿಗಿದು ತಪ್ಪಿಸಿಕೊಂಡಿದ್ದು, ಒಬ್ಬನನ್ನು ಹಿಡಿಯುವಲ್ಲಿ ಸಫಲರಾದರು. ಬಂಧಿತನಾದವನನ್ನು ಮಧ್ಯಪ್ರದೇಶದ ದೀಪಕ್ ಸಾಹು (35)ಎಂದು ಗುರುತಿಸಲಾಗಿದೆ. ಈತನ ಮೇಲೆ ಹಿಂದೆ ಇಂತಹ ಹಲವು ಪ್ರಕರಣಗಳು ದಾಖಲಾಗಿದ್ದು, ಸೆರೆಹಿಡಿದು ನೀಡಿದ ರಾಜೇಶ್ ಕುಲಾಲ್ ರ ಕಾರ್ಯವನ್ನು ಪೊಲೀಸರು ಶ್ಲಾಘಿಸಿದ್ದಾರೆ.