ಕಿನ್ನಿಗೋಳಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಲಾರಿಯೊಂದಕ್ಕೆ ಸೈಡ್ ಕೊಡುವ ವೇಳೆ ಬೊಲೇರೋ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ನದಿಗೆ ಉರುಳಿದ
ಘಟನೆ ಕಿನ್ನಿಗೋಳಿ ಸಮೀಪದ ಸಂಕಲಕರಿಯ ಬಳಿ ಇಂದು ಬೆಳಗ್ಗೆ ೯ ಗಂಟೆಯ ಸುಮಾರಿಗೆ ಸಂಭವಿಸಿದ್ದು, ಈ ಸಂದರ್ಭ ಅಪಾಯದಲ್ಲಿದ್ದವರನ್ನು ಕಾಪಾಡಲು ಪ್ರಾಣ ಲೆಕ್ಕಿಸದೇ ಲೆಕ್ಕಿಸದೇ ನದಿಗೆ ಹಾರಿದ ಇಬ್ಬರು ಕುಲಾಲ ಸಮುದಾಯದ ಯುವಕರು ಸ್ಥಳೀಯವಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬೋಳ ನಿವಾಸಿ ಡಯಾನಾ ಅವರು ತಮ್ಮ ಸೋದರಿಯ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಪತಿ ಹಾಗೂ ಇಬ್ಬರು ಮಕ್ಕಳ ಜೊತೆ ಬೊಲೆರೋ ವಾಹನದಲ್ಲಿ ಮಂಗಳೂರು ಕಡೆ ಬರುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಮುಂಭಾಗದಲ್ಲಿ ಲಾರಿಯೊಂದು ಬಂದಿದ್ದು ಈ ವೇಳೆ ಚಾಲಕ ಸೈಡ್ ಕೊಡುವ ವೇಳೆ ನಿಯಂತ್ರಣ ಕಳೆದುಕೊಂಡು ಬೊಲೆರೋ ವಾಹನ ನದಿಗೆ ಉರುಳಿತ್ತು. ಇದನ್ನು ಗಮನಿಸಿದ ನಂದು ಯಾನೆ ಗುಣಪಾಲ ಮೂಲ್ಯ ಮತ್ತು ಅಶೋಕ್ ಕುಲಾಲ್ ನೀರಿಗೆ ಹಾರಿ ರೋಪ್ ಸಹಾಯದಿಂದ ವಾಹನದಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳು ಹಾಗೂ ತಂದೆಯನ್ನು ರಕ್ಷಿಸಿದ್ದಾರೆ. ಆದರೆ ಡಯಾನಾ(೪೫) ಎಂಬ ಮಹಿಳೆಯನ್ನು ರಕ್ಷಿಸಲು ಅಸಾಧ್ಯವಾಗಿದ್ದು, ಘಟನೆಯಲ್ಲಿ ಅವರು ನೀರುಪಾಲಾಗಿದ್ದಾರೆ. ಚಾಲಕ ಸ್ಟ್ಯಾನಿ ಮಸ್ಕರೇನ್ಹಸ್, ಮಕ್ಕಳಾದ ಶಲ್ಟನ್ ಮತ್ತು ಶರ್ಮನ್ ಅವರನ್ನು ರಕ್ಷಿಸಿರುವ ನಂದು ಯಾನೆ ಗುಣಪಾಲ ಮೂಲ್ಯ ಅವರು ಪಟ್ಟೆಕ್ರಾಸ್ ನಿವಾಸಿ ಶಿವ ಮೂಲ್ಯ ಎಂಬವರ ಪುತ್ರನಾಗಿದ್ದು, ಅಂಗಡಿಯೊಂದನ್ನು ಹೊಂದಿದ್ದಾರೆ. ಅಶೋಕ್ ಕುಲಾಲ್ ಅವರು ಉಳೆಪಾಡಿಯ ಲಕ್ಷ್ಮಣ್ ಕುಲಾಲ್ ಅವರ ಪುತ್ರನಾಗಿದ್ದು, ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ.
ಅಪಾಯಕ್ಕೆ ಸಿಲುಕಿದವರನ್ನು ರಕ್ಷಿಸಲು ತಮ್ಮ ಸಾಹಸ ಮೆರೆದಿರುವ ಈ ಇಬ್ಬರು ಯುವಕರ ಬಗ್ಗೆ ಸ್ಥಳೀಯವಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರ ಧೈರ್ಯದ ಕೆಲಸವನ್ನು ಶ್ಲಾಘಿಸಿರುವ ಪೊಲೀಸರು ಇಬ್ಬರನ್ನೂ ಸನ್ಮಾನಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.