ಕದಳೀಪ್ರಿಯನ ನೆಲದಲ್ಲಿ ಜರುಗಿತು ಐತಿಹಾಸಿಕ ‘ಕುಲಾಲ ಸಮಾವೇಶ’: ಹರಿದು ಬಂತು ಜನಸಾಗರ
ಪೆರ್ಡೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಪೊಡವಿಗೊಡೆಯ ಉಡುಪಿಯ ಕಡೇಗೋಲ ಕೃಷ್ಣನಿಗೆ ಸಮೀಪವಾಗಿ, ಕದಳೀ ಪ್ರಿಯ ಅನಂತ ಪದ್ಮನಾಭನ ಪಾದದೂಳಿಯಿಂದ ಪಾವನನೆಲ ಎನಿಸಿದ ಪೆರ್ಡೂರಿನಲ್ಲಿ ಮೈದಳೆದು ನಿಂತ ಕುಲಾಲ ಸಂಘ ಪೆರ್ಡೂರು ಇದರ ಐತಿಹಾಸಿಕ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಜರುಗಿದ ಕುಲಾಲರ ಬೃಹತ್ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಳಗೊಂಡ ‘ಕುಲಾಲ ಸಂಭ್ರಮ’ ಅಭೂತಪೂರ್ವ ಯಶಸ್ಸಿನೊಂದಿಗೆ ಶುಭಾಂತ್ಯಗೊಂಡಿತು. ಸರಿಸುಮಾರು ಐದು ಸಾವಿರಕ್ಕೂ ಅಧಿಕ ಮಂದಿ ಸಮಾವೇಶಕ್ಕೆ ಆಗಮಿಸಿ ಕುಂಭ ಶಕ್ತಿಯನ್ನು ಜಗಜ್ಜಾಹಿರುಗೊಳಿಸಿದರು. ಸಾಮಾಜಿಕ-ರಾಜಕೀಯ ಪ್ರಾತಿನಿಧ್ಯ ಕುಲಾಲರಿಗೆ ಸಿಗಲಿ ಎಂಬ ಒಕ್ಕೂರಲ ಹಕ್ಕೋತ್ತಾಯ ಎಲ್ಲೆಡೆಯಿಂದ ಮೂಡಿಬಂತು.
ಹೌದು..ಡಿ. ೨೩ರ ಆ ದಿನ ಪೆರ್ಡೂರು ಬುಕ್ಕಿಗುಡ್ಡೆಯ ಕುಲಾಲ ಸಮುದಾಯ ಭವನ ನವವದುವಿನಂತೆ ತಳಿರು-ತೋರಣಗಳಿಂದ ಶೃಂಗಾರಗೊಂಡು ನಿಂತಿತು. ಕುಲಾಲ ಸಮುದಾಯದ ಇತಿಹಾಸದಲ್ಲೆ ವಿಶಿಷ್ಟ ಸಂರಚನೆಯೊಂದಿಗೆ ನಿರ್ಮಾಣಗೊಂಡ ಬೃಹತ್ ವೇದಿಕೆ, ಸಭಾಂಗಣ, ಸ್ವಾಗತ ಗೋಪುರ ಪ್ರತಿಯೊಂದು ಕುಂಭ ಪರಿಮಳವನ್ನು ಸೂಸುತ್ತಾ ಸಾಗಿ ಬಂದ ಅಪಾರ ಜನಸ್ತೋಮವನ್ನು ಕೊಂಬು ಕಹಳೆ ಚಂಡೆಯ ಸದ್ದಿನೊಂದಿಗೆ ಪ್ರೀತ್ಯಾಧರದಿಂದ ಸ್ವಾಗತಿಸಿಕೊಂಡಿತು. ಅಕ್ಷರಶಃ ಕರಾವಳಿಯಲ್ಲಿ ಕುಂಬಾರ ಜಾತ್ರೆಯೇ ನಡೆದುಹೋಯ್ತು.
ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಐತು ಕುಲಾಲ್ ಕನ್ಯಾನ ಅವರ ಪ್ರಾಯೋಜಕತ್ವದಲ್ಲಿ ರೂಪಿತಗೊಂಡ ನವೀಕೃತ ವೇದಿಕೆ ಮತ್ತು ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ರಾಮ ಕುಲಾಲ್ ಪಕ್ಕಾಲು ಅವರ ಪ್ರಾಯೋಜಕತ್ವದಲ್ಲಿ ರೂಪಿತಗೊಂಡ ಸಭಾಂಗಣದ ಅವರಣ ಗೋಡೆಯನ್ನು ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಜಿ ದಿವ್ಯ ಹಸ್ತದಿಂದ ಉದ್ಘಾಟಿಸಿದರು. ಹಿರಿಯ ಕುಲಾಲ ಮುತ್ಸದ್ದಿ ಐತು ಕುಲಾಲ್ ಕನ್ಯಾನ ಕುಲಾಲ ಸಮುದಾಯ ಸಾಗಿ ಬಂದುದರ ಭವ್ಯ ಕಥನದಂತೆ ರೂಪಗೊಂಡ ಕುಂಬಾರಿಕೆ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆಯನ್ನು ತಂದಿತ್ತರು.
ನಂತರ ನಡೆದ ಐತಿಹಾಸಿಕ ಕುಲಾಲ ಸಮಾವೇಶವನ್ನು ಉದ್ಘಾಟಿಸಿದ ಮಾಣಿಲ ಶ್ರೀಗಳು ಮಣ್ಣಿನ ಕಾಯಕ ಕರ್ಮದ ಶ್ರೇಷ್ಟತೆ, ಮೌಲ್ಯಗಳ ಪ್ರಸಾರಿಕೆ, ಭಜನೆಯ ಮಹತ್ವದ ಕುರಿತು ಆಶೀರ್ವಚನದ ನಲ್ನುಡಿಗಳನ್ನು ಇತ್ತು ನೆರೆದ ಜನಸ್ತೋಮವನ್ನು ಪಾವನಗೊಳಿಸಿದರು. ಕರ್ನಾಟಕ ರಾಜ್ಯ ಕುಂಬಾರರ ಮಾಹಸಂಘದ ರಾಜ್ಯಾಧ್ಯಕ್ಷ ಶಿವಕುಮಾರ ಚೌಡಶೆಟ್ಟಿ ‘ಕುಲಾಲ ಸಮಾಜ ವಸ್ತುಸ್ಥಿತಿ’ ವಿಷಯದ ಕುರಿತು ನೇರ-ನಿಷ್ಠುರ ದಿಕ್ಸೂಚಿ ಮಾತುಗಳನ್ನಾಡಿದರು. ಕುಲಾಲ ಸಮುದಾಯ ಸಾಗಿ ಬಂದ ಇತಿಹಾಸ, ರಾಜಕೀಯ ಪ್ರಾತಿನಿಧ್ಯದದ ಅನಿವಾರ್ಯತೆ, ರಾಜಕೀಯ ಪಕ್ಷಗಳ ಕಡೆಗಣನೆ, ಕುಂಬಾರ ಸಮುದಾಯ ಒಗ್ಗಟ್ಟಿನ ಅನಿವಾರ್ಯತೆಯ ಕುರಿತು ಶ್ರೇಷ್ಟ ಮಾತುಗಳು ಶಿವಕುಮಾರ ಚೌಡಶೆಟ್ಟಿಯವರಿಂದ ಅಭಿವ್ಯಕ್ತಗೊಂಡಿತು. ಇದೇ ಸಂಧರ್ಭ ಕರಾವಳಿ ಕುಲಾಲ ಯುವ ವೇದಿಕೆಯಿಂದ ದಶಮಾನದ ಸಂಭ್ರಮದಲ್ಲಿ ಮಣ್ಣಿನ ಹಣತೆಗಳನ್ನು ಜನರಿಗೆ ವಿತರಿಸಿದ್ದು ಕಾರ್ಯಕ್ರಮದ ಅರ್ಥಪೂರ್ಣತೆಯನ್ನು ಹೆಚ್ಚಿಸಿತು.
ಈ ಐತಿಹಾಸಿಕ ಕುಲಾಲ ಸಮಾವೇಶದಲ್ಲಿ ಕುಲಾಲ ಸಮಾಜದ ಕಣ್ಮಣಿಗಳಾದ ಧೀಮಂತ ಪತ್ರಕರ್ತ ಅಮ್ಮೆಂಬಳ ಆನಂದ, ಕುಲಾಲ ರತ್ನ ಡಾ. ಎಮ್ ವಿ ಕುಲಾಲ್, ಕುಲಾಲ ಕಣ್ಮಣಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ದಶಮಾನದ ಗೌರವ ಪುರಸ್ಕಾರವನ್ನಿತ್ತು ಗೌರವಿಸಿದ್ದು ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿತು. ಆಗಮಿಸಿದ ಜನಪ್ರತಿನಿಧಿಗಳಾದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಕೋಟ ಶ್ರೀನಿವಾಸ್ ಪೂಜಾರಿ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಪೌಂಡೇಶನಿನ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಕುಂಬಾರ ಸಮುದಾಯದ ಬಗೆಗೆ ಪ್ರಿತಿಯಿಟ್ಟು ಶುಭಹಾರೈಕೆಯ ಮಾತುಗಳನ್ನು ಹೇಳಿದರು.
ಪೆರ್ಡೂರು ಕುಲಾಲ ಸಂಘದ ಈ ಐತಿಹಾಸಿಕ ದಶಮಾನೋತ್ಸವ ಸಮಾರಂಭದಲ್ಲಿ ಸಾಮಾಜಿಕ ಮತ್ತು ಮಾಧ್ಯಮ ಸೇವೆಗಾಗಿ ಕುಲಾಲ ಸಮುದಾಯದ ವಾಣಿ `ಕುಲಾಲ್ ವಲ್ಡ್ .ಕಾಮ್’ ಗೆ, ರಾಜ್ಯಮಟ್ಟದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪೆರ್ಡೂರಿಗೆ, ರಾಷ್ಟ್ರಪತಿ ಚಿನ್ನದ ಪದಕ ಪುರಸ್ಕೃತ ನರಶಾಸ್ತ್ರ ವಿಭಾಗದ ಪ್ರಸಿದ್ದ ವೈದ್ಯ ಡಾ. ಪುಷ್ಪರಾಜ್, ಸಂಶೋಧಕ ಡಾ. ಸಂದೀಪ್ ಕೆ. ವಿ ಬೈರಂಪಳ್ಳಿ, ಯಕ್ಷಗುರು ಐರೋಡಿ ಮಂಜುನಾಥ್ ಕುಲಾಲ್, ಚಲನಚಿತ್ರ ನಟ ಮತ್ತು ರಂಗಕರ್ಮಿ ತಿಮ್ಮಪ್ಪ ಕುಲಾಲ್ ಬಿ.ಸಿ ರೋಡ್, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೆಶಕ ಶೇಖರ ಕುಲಾಲ್, ರಂಗಭೂಮಿ ಕಲಾವಿದ ರಾಜೇಶ್ ಮುಗುಳಿ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ಪ್ರಗತಿಪರ ಕೃಷಿಕ ರುಕ್ಕಯ್ಯ ಮೂಲ್ಯ ಪಾವಂಜೆ, ಚಲನಚಿತ್ರ ನಟಿ ಅಮಿತಾ ಕುಲಾಲ್, ಗಾಯಕಿ ವಿಜಯಲಕ್ಷ್ಮಿ ಮೆಟ್ಟಿನಹೊಳೆ ಸೇರಿದಂತೆ ಹಲವು ಸಾಧಕರಿಗೆ ಕುಲಾಲ ಸಂಭ್ರಮ ಗೌರವ ಪುರಸ್ಕಾರ ಮತ್ತು ಯುವ ಪುರಸ್ಕಾರವನ್ನಿತ್ತು ಗೌರವಿಸಲಾಯ್ತು.
ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಗೋಪಾಲ ಮೂಲ್ಯ, ಕರಾವಳಿ ಕುಲಾಲ ಯುವ ವೇದಿಕೆ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷ ಸತೀಶ್ ಕುಲಾಲ್ ನಡೂರು, ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಾಕರಿ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲು, ಪೆರ್ಡೂರು ಗ್ರಾ. ಪಂ ಅಧ್ಯಕ್ಷೆ ಶಾಂಭವಿ ಕುಲಾಲ್ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.
ದಶಮಾನೋತ್ಸವ ಸಮಿತಿಯ ಕಾರ್ಯಧ್ಯಕ್ಷ ಶಂಕರ್ ಕುಲಾಲ್ ಪೆರಂಪಳ್ಳಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಕೃಷ್ಣಪ್ಪ ಮೂಲ್ಯ ಹಿರಿಯಡಕ ಪ್ರಸ್ತಾವಿಸಿ ಪೆರ್ಡೂರು ಕುಲಾಲ ಸಂಘ ಸಾಗಿ ಬಂದುದುರ ಬಗೆಗೆ ಸೊಗಸಾಗಿ ವಿಸ್ತರಿಸಿದರು. ಮಂಜುನಾಥ ಹಿಲಿಯಾಣ ಯಶಸ್ವಿಯಾಗಿ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಪ್ರಾದ್ಯಪಕ ಡಾ. ದುಗ್ಗಪ್ಪ ಕಜೆಕಾರ್ `ತುಳುನಾಡ ಕುಲಾಲರಲ್ಲಿ ಬಳಿ(ಬರಿ) ಪದ್ಧತಿ: ಒಂದು ವಿಶ್ಲೇಷಣೆ’ ಎಂಬ ವಿಷಯದ ಕುರಿತು ಪ್ರಾಜ್ಞ ಮಾತುಗಳನ್ನಾಡಿದರು. ಉಪ್ಯಾನ್ ಬರಿಯ ಹೆಣ್ಣು ಮಕ್ಕಳ ಮೇಲೆ ಇರುವ ಮೂಢನಂಬಿಕೆ ತಪ್ಪಾದ ಸಂಪ್ರದಾಯ. ಎಲ್ಲ ಬರಿಗಳು ಒಂದೇ ಎಂಬ ದಿಟ್ಟ ಮಾತುಗಳು ಅವರಿಂದ ಅಭಿವ್ಯಕ್ತಗೊಂಡಿತು. ನಂತರ ತುಳುವ ಬೊಳ್ಳಿ ದಯಾನಂದ ಜಿ. ಕತ್ತಲ್ ಸಾರ್ ‘ಮಣ್ಣಿನ ಮಕ್ಕಳ ಮಹಿಮೆಯ ಮರ್ಮ ಕುಂಬಾರರ ಬಗ್ಗೆ ನುಡಿಸೇಸೆ’ ಎನ್ನುವ ವಿಶಿಷ್ಟ ವಿಷಯದ ಮೇಲೆ ಅರ್ಥಪೂರ್ಣ ಮಾತುಗಳನ್ನಾಡಿದರು.
ದಶಮಾನೋತ್ಸವ ಸಮಿತಿಯ ವಿಶಿಷ್ಟ ಪರಿಕಲ್ಪನೆಯಲ್ಲಿ ರಾಜ್ಯದ ಸಮುದಾಯ ಕಾರ್ಯಕ್ರಮದಲ್ಲೆ ಮೊದಲಬಾರಿಗೆ ಎಂಬಂತೆ ರೂಪಿತಗೊಂಡ ‘ಯುವ ಉದ್ಯಮಿಗಳ ಸಮ್ಮಿಲನ’ ಎಂಬ ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತಕ್ಕೂ ಅಧಿಕ ಯುವ ಉದ್ಯಮಿಗಳ ಉದ್ಯಮದ ಪರಿಚಯವನ್ನು ಸೇರಿದ ಜನಸ್ತೋಮಕ್ಕೆ ಮಾಡಿಕೊಡಲಾಯಿತು. ಯಶಸ್ವಿ ಉದ್ಯಮಿಗಳನ್ನು ಸನ್ಮಾನಿಸಿ ಗೌರವಿಸಲಾಯ್ತು. ಪೆರ್ಡೂರು ಕುಲಾಲ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ದಿನೇಶ್ ಪಟ್ಲ ಅವರ ಸಾರಥ್ಯದಲ್ಲಿ ನಂತರ ನಡೆದ ಸ್ಪರ್ಧಾ ಸಾಂಸ್ಕೃತಿಕ ಕಾರ್ಯಕ್ರಮ ನರೆದ ಜನಸ್ತೋಮವನ್ನು ಸಾಂಸ್ಕೃತಿಕ ಲೋಕಕ್ಕೆ ಕರೆದು ತಂದಿತು. ಶಿಳ್ಳೆ, ಚಪ್ಪಾಳೆಗಳೇ ತುಂಬಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು. ಒಟ್ಟಿನಲ್ಲಿ ಪೆರ್ಡೂರು ಕುಲಾಲ ಸಂಘದ ಈ ಐತಿಹಾಸಿಕ ದಶಮಾನೋತ್ಸವ ಕರಾವಳಿಯ ಕುಲಾಲ ಸಂಘಟನೆಯ ಗಟ್ಟಿ ಧ್ಯೋತಕದಂತೆ ಅಭೂತಪೂರ್ವ ಯಶಸ್ಸಿನಿಂದ ಸಾಗಿ ಬಂತು.