ಬಂಟ್ವಾಳ(ಡಿ.೨೨, ಕುಲಾಲ್ ವರ್ಲ್ಡ್ ನ್ಯೂಸ್): ಬೀಡಿ ಕಟ್ಟಿ ಬಂದ ಮೊತ್ತದಲ್ಲಿ ಬದುಕು ನಿರ್ವಹಿಸುತ್ತಿರುವ ಕಡುಬಡ ಕುಟುಂಬದ ಮಹಿಳೆಯೊಬ್ಬರು ಮಾರಣಾಂತಿಕ ಕ್ಯಾನ್ಸರ್ ಖಾಯಿಲೆಯಿಂದ ನರಳುತ್ತಿದ್ದು, ತನ್ನ ಜೀವ ಉಳಿಸಲು ತಗಲುವ ಚಿಕಿತ್ಸಾ ವೆಚ್ಚಕ್ಕೆ ಹಣವಿಲ್ಲದೆ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.
ಬಂಟ್ವಾಳ ಮೂಡ ಗ್ರಾಮದ ಗಾಂದೋಡಿ ಎಂಬಲ್ಲಿ ವಾಸವಾಗಿರುವ ದಿವಂಗತ ವೆಂಕಪ್ಪ ಮೂಲ್ಯ ಅವರ ಪತ್ನಿ ಲಲಿತಾ ಮೂಲ್ಯ (60ವರ್ಷ) ಅವರು ಕಳೆದ ಮೂರು ವರ್ಷದ ಹಿಂದೆ ಕ್ಯಾನ್ಸರ್ ಗೆ ತುತ್ತಾಗಿದ್ದರು. ಬೀಡಿ ಕಾರ್ಮಿಕರಾಗಿ ದುಡಿದು ಬದುಕುತ್ತಿರುವ ಈ ಕುಟುಂಬ ಸದ್ಯ ಸಂಪೂರ್ಣ ಸಾಲದಲ್ಲಿ ಮುಳುಗಿದ್ದು, ಸದ್ಯ ಚಿಕಿತ್ಸೆಗೆ ಹಣ ಹೊಂದಿಸಲು ದಿಕ್ಕು ತೋಚದೆ ಅಹೋರಾತ್ರಿ ಚಿಂತೆಯಲ್ಲೇ ದಿನ ದೂಡುವಂತಾಗಿದೆ.
ಲಲಿತಾ ಅವರಿಗೆ ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನಿದ್ದು, ಡ್ರೈವರ್ ಕೆಲಸ ಮಾಡುತ್ತಿದ್ದ ಈತನಿಗೂ ಹೆಚ್ಚಿನ ಆದಾಯವಿಲ್ಲ. ಪತಿಯ ಸಾವಿನಿಂದ ಬದುಕಿನ ಒಂದು ಬಂಡಿಯನ್ನು ಕಳೆದುಕೊಂಡರೂ ಧೃತಿಗೆಡದೆ ಬೀಡಿ ಸುತ್ತಿ, ತನ್ನ ಮಕ್ಕಳನ್ನು ಸಾಕುತ್ತಾ ಮೂವರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕಂಗಾಲಾಗಿದ್ದ ಲಲಿತಾ ಅವರು ಇದೀಗ ಸ್ವತಃ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದು ಬಡ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.
ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಲಿತಾ ಅವರು ಜೀವ ಉಳಿಸಲು ಪರದಾಡುತ್ತಿದ್ದಾರೆ. ಲಲಿತಾ ಅವರ ರೋಗವನ್ನು ವೈದ್ಯರು DLBCL(Diffuse Large B-Cell Lymphoma) ಎಂದು ಗುರುತಿಸಿದ್ದು, ಈಗಾಗಲೇ ಇದರ ಚಿಕಿತ್ಸೆಯ ಭಾಗವಾಗಿ ಎರಡನೇ ಹಂತದ ಕೀಮೋಥೆರಪಿ ಮುಗಿಸಿದ್ದಾರೆ. ಪ್ರಸ್ತುತ ಕೊನೆಯ ಹಂತದ ಚಿಕಿತ್ಸೆ ಬಾಕಿ ಉಳಿದಿದ್ದು, ಇದಕ್ಕೆ ತಕ್ಷಣಕ್ಕೆ ಸುಮಾರು 50 ಸಾವಿರಕ್ಕೂ ಅಧಿಕ ಹಣದ ಅವಶ್ಯಕತೆ ಇದೆ. ಚಿಕಿತ್ಸೆಗೆ ಹಣ ಹೊಂದಿಸಲು ದಿಕ್ಕು ತೋಚದೆ ಬರಿಗೈಯಲ್ಲಿ ಅಲೆದಾಡುತ್ತಿದ್ದು ಸಹೃದಯಿ ದಾನಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಘ-ಸಂಸ್ಥೆಗಳು, ದಾನಿಗಳು ಚಿಕಿತ್ಸೆಗಾಗಿ ಕರುಣೆ ತೋರಿ ಆರ್ಥಿಕ ಸ್ಪಂದನೆ ನೀಡಿದರೆ ಬಡ ಮಹಿಳೆಯ ಜೀವ ಉಳಿಸಬಹುದು.ನೊಂದಿರುವ ಮಹಿಳೆಗೆ ನೆರವಾಗಬಯಸುವ ದಾನಿಗಳು ಅವರ ಕೆಳಗಿನ ಬ್ಯಾಂಕ್ ಖಾತೆ ಹಣ ಕಳಿಸಬಹುದು.
Lalitha
W/O Late Venkappa Moolya
Syndicate Bank, Bantwal Main Road,
A/c No: 01372200069043
IFSC Code: SYNB0000137
Mobile : 9902189836