ಸುರತ್ಕಲ್(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಬೈಕಂಪಾಡಿ ಸಮೀಪದ ಮೀನಕಳಿಯ ಎಂಬಲ್ಲಿ ಶನಿವಾರ ಬೆಳಗ್ಗೆ ಅಗ್ನಿ ಆಕಸ್ಮಿಕ ಸಂಭವಿಸಿ ಮನೆ ಸಂಪೂರ್ಣ ಅಗ್ನಿಗಾಹುತಿಯಾಗಿದ್ದು, ಬಡ ಕುಟುಂಬವೊಂದು ಬೀದಿ ಪಾಲಾಗಿದೆ.
ಕೇಶವ ಕುಲಾಲ್ ಅವರು ಬೆಳಗ್ಗೆ ಎಂದಿನಂತೆ ಬೈಕಂಪಾಡಿಯಲ್ಲಿರುವ ತಮ್ಮ ಕ್ಯಾಂಟೀನ್ ಕೆಲಸಕ್ಕೆ ತೆರಳಿದ್ದರು. ಹನ್ನೊಂದು ಗಂಟೆ ಸುಮಾರಿಗೆ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು ಮನೆಯೊಳಗಿದ್ದ ಅಮೂಲ್ಯ ವಸ್ತುಗಳು ,ದಾಖಲೆ ಪತ್ರ, ಪಡಿತರ ಚೀಟಿ, ಆಧಾರ್ ,ಬಟ್ಟೆ ಬರೆ,ಅಡುಗೆ ಪಾತ್ರೆಗಳ ಸಹಿತ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಬೆಂಕಿ ನಂದಿಸಲು ಸ್ಥಳೀಯ ಕೋಡಿಕಲ್ ಮೊಗವೀರ ಮಹಾಸಭಾದ ಸದಸ್ಯರು,ಯುವಕರು ನೆರವಾದರು.ಅಗ್ನಿಶಾಮಕ ಸಿಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.
ಬೀದಿಗೆ ಬಿದ್ದ ಕುಟುಂಬ:
ಕೇಶವ ಕುಲಾಲ್ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದು ಇದೀಗ ಅಗ್ನಿ ಆಕಸ್ಮಿಕದಿಂದ ಬೀದಿಗೆ ಬಂದಿದ್ದಾರೆ. ರಾತ್ರಿ ತಂಗಲು ಮನೆಯೇ ಇಲ್ಲದಂತಾಗಿದೆ. ಇನ್ನು ಉಟ್ಟಿದ್ದ ಉಡುಗೆ ಬಿಟ್ಟರೆ ಯಾವುದೂ ಉಳಿದಿಲ್ಲ. ಇತ್ತ ಅಡುಗೆ ಮಾಡಲು ಪಾತ್ರೆಗಳೂ ಇಲ್ಲ. ಇಬ್ಬರು ಹೆಣ್ಣು ಮಕ್ಕಳು ಇರುವ ಬಡ ಕುಟುಂಬವಾಗಿದೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಅಗ್ನಿ ಸಂಭವಿಸಿದ ಸ್ಥಳಕ್ಕೆ ಕಾರ್ಪೊರೇಟರ್ ಪುರುಷೋತ್ತಮ್ ಚಿತ್ರಾಪುರ, ಗಣೇಶ್ ಹೊಸಬೆಟ್ಟು ಭೇಟಿ ನೀಡಿ ಸರಕಾರದಿಂದ ಸಿಗುವ ನೆರವು ಒದಗಿಸುವ ಭರವಸೆ ನೀಡಿದರು.ಕಂದಾಯ ಅಧಿಕಾರಿ,ಗ್ರಾಮಕರಣಿಕ ಭೇಟಿ ನೀಡಿ ನಷ್ಟದ ಅಂದಾಜು ನಡೆಸಿ ಸಂಬಂದ ಪಟ್ಟ ಇಲಾಖೆಗೆ ಕಳಿಸಲು ಕ್ರಮ ಕೈಗೊಂಡಿದ್ದಾರೆ.