ಹಿರಿಯಡ್ಕ (ಡಿ. ೧೯): ರೌಡಿ ಶೀಟರ್ ವರ್ವಾಡಿಯ ಪ್ರವೀಣ್ ಕುಲಾಲ್ (40) ಅವರನ್ನು ದುಷ್ಕರ್ಮಿಗಳ ತಂಡವೊಂದು ಹಾಡಹಗಲೇ ಕೊಚ್ಚಿ ಕೊಲೆಗೈದ ಭೀಕರ ಘಟನೆ ಹಿರಿಯಡ್ಕ ಸಮೀಪದ ಕೋಟನಕಟ್ಟೆ ಎಂಬಲ್ಲಿ ನಡೆದಿದೆ.
ಪೆರ್ಣಂಕಿಲ ಗ್ರಾಮದ ವರ್ವಾಡಿ ಶಂಕರ ಕುಲಾಲರ ಮಗ ಪ್ರವೀಣ್ ಕುಲಾಲ್ ಮಧ್ಯಾಹ್ನ ಇತರ ಮೂವರ ಜೊತೆ ಸ್ಥಳೀಯ ಬಾರ್ ಅಂಡ್ ರೆಸ್ಟೋರೆಂಟಿಗೆ ತೆರಳಿದ್ದು, ಇಲ್ಲಿ ಯಾವುದೋ ವಿಚಾರಕ್ಕೆ ಇವರೊಳಗೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ಸಂದರ್ಭ ಪ್ರವೀಣ್ ಮೇಲೆ ಹಲ್ಲೆ ನಡೆಸಲಾಗಿದ್ದು, ಅಪಾಯದ ಮುನ್ಸೂಚನೆ ಅರಿತ ಆತ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಬೆನ್ನಟ್ಟಿದ ತಂಡ ಬಾರ್ ಮುಂಭಾಗದ ಟ್ರಾವೆಲ್ ಏಜೆನ್ಸಿಯೊಂದರ ಕಚೇರಿ ಹೊರಗಡೆ ಪ್ರವೀಣ್ ತಲೆಗೆ ಮಚ್ಚಿನಿಂದ ಹೊಡೆದು ಭೀಕರ ಹತ್ಯೆ ನಡೆಸಿದೆ.
ಗೂಂಡಾ ಪ್ರವೃತ್ತಿಯಲ್ಲಿ ತೊಡಗಿಕೊಂಡಿದ್ದ ಪ್ರವೀಣ್ ಕುಲಾಲ್ ಮೇಲೆ ಪೊಲೀಸರು ೨೦೦೫ರಲ್ಲಿ ಗೂಂಡಾ ಕಾಯ್ದೆ ಹೇರಿದ್ದರು. ಇತ್ತೀಚೆಗೆ ಬೈಲೂರು ಕ್ಷೇತ್ರದ ಬಿಜೆಪಿಯ ಜಿಲ್ಲಾ ಪಂಚಾಯಿತಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಅವರ ಕೊಲೆಗೆ ಯತ್ನಿಸಿದ ಆರೋಪ ಪ್ರವೀಣ್ ಮೇಲಿತ್ತು.
kulalworld.com