ಕಾಪು (ಡಿ.೧೭) :ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯೋರ್ವಳ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಶಿರ್ವಾ ಠಾಣಾವ್ಯಾಪ್ತಿಯ ಕುತ್ಯಾರಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯನ್ನು ಕುತ್ಯಾರು ಪೊಯ್ಯಮಾರು ನಿವಾಸಿ ಸಂಜೀವ ಮೂಲ್ಯ ಇವರ ದ್ವಿತೀಯ ಪುತ್ರಿ ಮಂಜುಳ (೨೪) ಎಂದು ಗುರುತಿಸಲಾಗಿದೆ.
ಮಂಜುಳ ಕಳೆದ ಬುಧವಾರ ಬೆಳಗ್ಗೆ ಬ್ಯಾಂಕಿಗೆ ಹೋಗಿಬರುವುದಾಗಿ ತಿಳಿಸಿ ಮನೆಯಿಂದ ಹೋದವಳು ಮರಳಿ ಮನೆಗೆ ಬಾರದಿರುವುದನ್ನು ಗಮನಿಸಿದ ಆಕೆಯ ತಂದೆ ಶಿರ್ವಾ ಠಾಣೆಗೆ ನೀಡಿದ ದೂರಿನಂತೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆದರೆ ನಿನ್ನೆ ಬೆಳಿಗ್ಗೆ ಮನೆಯ ಸಮೀಪದ ಸುಧಾಕರ ಶೆಟ್ಟಿ ಎಂಬವರ ತೋಟದಲ್ಲಿರುವ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಾಪು ವೃತ್ತ ನಿರಿಕ್ಷಕ ಹಾಲಾಮೂರ್ತಿ ರಾವ್ ಹಾಗೂ ಶಿರ್ವಾ ಪೊಲೀಸರು ಸಮಾಜ ಸೇವಕ ಸೂರಿ ಶೆಟ್ಟಿ ಇವರ ಮುಂದಾಳತ್ವದಲ್ಲಿ ಶವವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಘಟನೆಯ ಬಗ್ಗೆ ಶಿರ್ವಾ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮಂಜುಳಾ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎಂದು ತಿಳಿದು ಬಂದಿದೆ.