ಮಂಗಳೂರು(ಅ.೨೩): `ನೆರವು ನೀಡುವ ದಾನಿಗಳು ದೇವರ ಸ್ವರೂಪಿಗಳು’ ಎನ್ನುವ ಮಾತೊಂದಿದೆ. ಜನರಲ್ಲಿ ಅತಿಯಾಸೆ ಹೆಚ್ಚಾಗಿ ಮಾನವೀಯತೆ ಮರೀಚಿಕೆಯಾಗುತ್ತಿರುವ ಕಾಲಘಟ್ಟದಲ್ಲಿ ಇಲ್ಲೊಬ್ಬರು ಬ್ರೈನ್ ಟ್ಯೂಮರ್ ಸಮಸ್ಯೆಯಿಂದ ಬಳಲುತ್ತಿರುವ ಕಿನ್ನಿಗೋಳಿ ದಾಮೋದರ ಮೂಲ್ಯರ ನೋವಿಗೆ ಸ್ಪಂದಿಸಿ ವೈಯಕ್ತಿಕವಾಗಿ 25,000 ರೂಪಾಯಿ ನೆರವು ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಮೂಲತಃ ಮಂಗಳೂರು ಉರ್ವ ಅಶೋಕನಗರ ನಿವಾಸಿಯಾಗಿದ್ದು, ಪ್ರಸ್ತುತ ಬೆಹರೈನ್ ನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಸೀತಾರಾಮ್ ಬಂಗೇರ ಹಣ ಕಳಿಸಿ ಸಹಾಯಹಸ್ತ ಚಾಚಿದವರು. ಮೂವರು ಹೆಣ್ಣು ಮಕ್ಕಳನ್ನು ಹೊಂದಿರುವ ಕಿನ್ನಿಗೋಳಿ ಗುತ್ತಕಾಡು ನಿವಾಸಿ ದಾಮೋದರ ಮೂಲ್ಯ ಅವರು ಕಡು ಬಡವರಾಗಿದ್ದು, ಬ್ರೈನ್ ಟ್ಯೂಮರ್ ರೋಗಕ್ಕೆ ಸಿಲುಕಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ನಲ್ಲಿ ವರದಿ ಪ್ರಕಟವಾಗಿತ್ತು. ಇದನ್ನು ಹಲವರು ಫೇಸ್ ಬುಕ್ ಮತ್ತು ವಾಟ್ಸಪ್ ನಲ್ಲಿ ಹಂಚಿಕೊಂಡಿದ್ದರು.
ನೆರವು ನೀಡುವ ಹಲವರು ಪ್ರಚಾರದಿಂದ ದೂರವೇ ಉಳಿಯುತ್ತಾರೆ. ಸೀತಾರಾಮ್ ಅವರೂ `ಕಷ್ಟದಲ್ಲಿರುವವರಿಗೆ ನೆರವು ನೀಡುವುದು ಕರ್ತವ್ಯ. ನನ್ನಿಂದಾದ ಕಿಂಚಿತ್ ಸಹಾಯ ಮಾಡಿದ್ದೇನೆ. ದಯವಿಟ್ಟು ಇದಕ್ಕೆಲ್ಲಾ ಪ್ರಚಾರ ಕೊಡಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.