ಉಡುಪಿ : ಪ್ರಸ್ತುತ ಉಡುಪಿ ಜಿಲ್ಲೆ ಉಡುಪಿ ತಾಲೂಕಿನ ಬ್ರಹ್ಮಾವರಕ್ಕೆ ಸಮೀಪವಾಗಿ ಬಲ-ಬದಿಗೆ ತೆಂಗು ಕಂಗುಗಳ ಮಧ್ಯೆ ವಿಸ್ತರಿಸಿಕೊಂಡು ನಿಂತಿರುವ ಊರೇ ಬಾರಕೂರು. ತೌಳವ ನಾಡಿನ ರಾಜಧಾನಿಯಾಗಿ ಮೆರೆದಾಡಿದ್ದ ಬಾರಕೂರು ಸಂಯುಕ್ತ ಸಂಸ್ಥಾನದ ವೈಭವೋಪೇತ ಇತಿಹಾಸ ಇಂದು ಬರೀಯ ನೆನಪು. ಬಿರು ಬಿಸಿಲಿಗೆ ಬೆದರಿ ಕಮರಿ-ಕರುಟಿ ಹೋದ ಹುಲ್ಲುಗಾವಲಿನ ಹಾಗೇ ಬಾರಕೂರು ‘ರಣ’ ಹೊಡೆಯುತ್ತಿದೆ.
ಇಂದು ಬಟ್ಟೆ ಒಗೆಯಲು ಉಪಯೋಗವಾಗುತ್ತಿರುವ ಎಷ್ಟೂ ಕಲ್ಲುಗಳು ಐತಿಹ್ಯದ ದತ್ತಿ ಶಾಸನಗಳು. ಬೇಲಿಗಿಟ್ಟ ಕಂಬಗಳು ಅರಮನೆಯ ಬುನಾದಿಗಳು. ಬಾವಿಯ ಸುತ್ತ ಹಾಸಿರುವ ಎಷ್ಟೂ ನುಣುಪು ಕಲ್ಲುಗಳು ಬಾರಕೂರಿನಲಿದ್ದ ಅಸಂಖ್ಯ ದೇವಸ್ಥಾನಗಳ ಪಳೆಯುಳಿಕೆಗಳು. ಮನೆಯ ಮೆಟ್ಟಿಲುಗಳು ಚರಿತ್ರೆಯ ದುರಂತ ಕಲ್ಲುಗಳು. ಇವತ್ತು ಬರಿದೇ ಹೂಳು ತುಂಬಿರುವ 10 ಕೆರೆಗಳ ಗರ್ಭದಲ್ಲಿ ಎಷ್ಟು ಐತಿಹ್ಯದ ಅವಶೇಷಗಳು ಹುದುಗಿವೆಯೋ? ಆಧಿಷೇಶನಿಗಷ್ಟೆ ಗೊತ್ತು.
ತೋಟದ ಮಧ್ಯೆ ಇರುವ ದೇವರ ಕಲ್ಲಿನ ಪೀಠ
ಇಲ್ಲಿರುವ ಎಲ್ಲ ಪುರಾತನ ಕಲ್ಲುಗಳು ಇತಿಹಾಸದ ಕಥೆಗಳನ್ನು ಸಾರಿ ಹೇಳುತ್ತಿವೆ; ಕೇಳಿಸಿಕೊಳ್ಳುವವರೇ ಇಲ್ಲವಾಗಿದ್ದಾರೆ! ಹಾಗಾಗಿಯೇ ಬಾರಕೂರನ್ನು ತೌಳವ ನಾಡಿನ ‘ಹಾಳು ಹಂಪೆ’ ಎಂದರೆ ಅದು ಅತಿಶಯದ ಉಕ್ತಿಯಲ್ಲ. ಬಾರಕೂರಿನ ಕುರಿತು ಪುರಾತತ್ವ ಇಲಾಖೆಯೋ ಅಥವಾ ಇತಿಹಾಸಜ್ಞರು ಇದುವರೆಗೆ ನೆಡೆಸಿದ ಅಧ್ಯಯನ ಸಾಗರದ ನೀರನ್ನು ಭೊಗಸೆಯಲ್ಲಿ ಮೊಗೆದು ತೊರಿಸಿದಷ್ಟೆ ಕಿರು ಪ್ರಯತ್ನದ್ದು. ಹಾಗಾಗಿ ಬಾರಕೂರು ತನ್ನ ವೈಭವೋಪೇತ ಇತಿಹಾಸವನ್ನು ಹೊರ ಜಗತ್ತಿಗೆ ಬಿಚ್ಚಿ ತೋರಿಸಿದ್ದು ತೀರಾ ಕಡಿಮೆ; ಬಚ್ಚಿಟ್ಟಿಕೊಂಡಿರುವುದೇ ಅಧಿಕ!!

ಈ ಬಾವಿ ಗಮನಿಸಿ. ಇದು ನಶಿಸಿಹೋಗಿರುವ ದೇವಸ್ಥಾನದ ಬಾವಿ ಅನಿಸಲ್ವೆ?
ನಾಗರಿಕತೆಯ ಹುಟ್ಟಿನೊಂದಿಗೆ ತನ್ನ ಹುಟ್ಟನ್ನು ಪಡೆದು ನಾಗರಿಕತೆಯ ವಿಕಾಸಕ್ಕೆ ಮೂಲ ಬುನಾಧಿಯನ್ನು ಹಾಕಿದ್ದು ಕುಂಬಾರ ಸಮುದಾಯದವರು. ಅದರಲ್ಲೂ ಕರಾವಳಿ ಕರ್ನಾಟಕದಲ್ಲಿ ಇವತ್ತು ಬದುಕು ಕಟ್ಟಿಕೊಂಡಿರುವ ಸುಮಾರು 3 ಲಕ್ಷದಷ್ಟಿರುವ ಕುಂಬಾರ ಸಮುದಾಯದ ಇತಿಹಾಸ ತೀರಾ ಪ್ರಾಚೀನವಾದ್ದು. ಕರಾವಳಿಯಲ್ಲಿ ಜನ ವಸತಿ ಯಾವಾಗಿನಿಂದ ಆರಂಭವಾಗಿರಬಹುದು ಎನ್ನುವುದರ ಬಗ್ಗೆ ಇತಿಹಾಸಜ್ಞರು ವಿವಿಧೆಡೆ ನೆಲದ ಉತ್ಖನನ ನೆಡಸುವಾಗ ಅವರಿಗೆ ಸಿಗುವ ಇತಿಹಾಸದ ಪ್ರಮುಖ ಕುರುಹೆ ಕುಂಬಾರ ಸಮುದಾಯ ತಯಾರಿಸಿದ ಮಡಿಕೆ, ಮಣ್ಣಿನ ವಿವಿಧ ರಚನೆಗಳು ಕಲಾಕೃತಿಗಳು. ಅಂದರೆ ಕರಾವಳಿಯ ಮೂಲ ಸಮುದಾಯಗಳ ಪಟ್ಟಿಯಲ್ಲಿ ಕುಂಬಾರರು ಅಂಗ್ರಪಂಕ್ತಿಯಲ್ಲಿ ಕಾಣುವವರು. ಇದನ್ನು ಇತಿಹಾಸಜ್ಞರೆ ಒಪ್ಪಿ ದಾಖಲಿಸಿದ್ದಾರೆ.
ಹೂಳು ತುಂಬಿರುವ ಮೂಡುಕೆರೆಯ ನೋಟ..ಈ ಕೆರೆಯೊಳಗೆ ಇತಿಹಾಸದ ಪಳೆಯುಳಿಕೆಗಳು ಏನೇನಿರಬಹುದೋ?
ಇಂತಹ ದೀರ್ಘ ಇತಿಹಾಸ ಹೊಂದಿರುವ ತೌಳವ ನಾಡಿನ ಕುಂಬಾರ ಮೂಲ ದೇವಸ್ಥಾನವೊಂದು ತೌಳವ ನಾಡಿನ ರಾಜಧಾನಿ ಬಾರಕೂರು ಸಂಯುಕ್ತ ಸಂಸ್ಥಾನದಲ್ಲಿ ಇರಲಿಲ್ಲವೇ? ಖಂಡಿತಾವಾಗಲೂ ಇದ್ದಿತ್ತು ಎಂಬುದು ಅನೇಕ ಹಿರಿಯರ ಅಭಿಪ್ರಾಯ. ಅಷ್ಟಕ್ಕೂ ಬಾರಕೂರಿನಲ್ಲೆ ತುಳು ನಾಡಿನ ಕುಂಬಾರ ಸಮುದಾಯದ ಮೂಲ ದೇವಸ್ಥಾನವಿತ್ತು ಎಂದು ವಾದಿಸುವುದಕ್ಕೂ ಕಾರಣ ಸಾಕಷ್ಟಿದೆ.
ಬಾರಕೂರು ದೇವಾಲಯಗಳ ನಾಡು. ಇದರ ಐತಿಹ್ಯವನ್ನು ಬಗೆದರೆ ಬರೊಬ್ಬರಿ 365 ದೇಗುಲಗಳು ಇದ್ದುದ್ದರ ಬಗ್ಗೆ ಮಾಹಿತಿಗಳು ಸಿಗುತ್ತವೆ.(ಇಂದು ಶೇ 75% ದೇಗುಲಗಳು ನಾಶವಾಗಿದೆ) ಅಷ್ಟೆ ಅಲ್ಲದೆ ತುಳು ನಾಡಿನ ಎಲ್ಲ ಜಾತಿಗಳ ಮೂಲ ಸಿಗುವುದು ಬಾರಕೂರಿನಲ್ಲೆ. ಈ ಎಲ್ಲ ಜಾತಿ ಸಮುದಾಯಗಳಿಗೆ ಸಂಬಂಧಿಸಿದ ಮೂಲ ದೇವಸ್ಥಾನವೂ ಬಾರಕೂರಿನಲ್ಲೆ ಇತ್ತು. ಈ ಅಧ್ಯಯನದ ಜಾಡೇ ಹಿಡಿದು ಬಾರಕೂರಿಗೆ ಹೊರಟರೆ ಮೊಗವೀರ ಸಮುದಾಯಕ್ಕೆ ಸಂಬಂಧಪಟ್ಟ ಕುಲಮಾಸ್ತಿ ದೇಗುಲ ನಮಗೆ ಸಿಗುತ್ತದೆ.
ಮೂಡುಕೆರೆ ದಂಡೆಗೆ ಹಾಸಿರುವ ಕಲ್ಲಿನ ಹಾದರ
ವಿಶ್ವಕರ್ಮ ಸಮುದಾಯಕ್ಕೆ ಹತ್ತಿರವಗಿರುವ ಕಾಳಿಕಾಂಬ ದೇಗುಲ ಕೈ ಬೀಸಿ ನಮ್ಮನ್ನು ಕರೆಯುತ್ತದೆ. ಗಾಣಿಗ ಸಮುದಾಯದ ಗೋಪಾಲಕೃಷ್ಣ ದೇಗುಲ, ದೇವಾಡಿಗ ಸಮುದಾಯದ ಏಕನಾಥೇಶ್ವರ, ಸವಿತಾ ಸಮಾಜದ ಅಧಿಕ ಮಂದಿ ಆರಾಧಿಸುವ ನಾಗೇಶ್ವರ ದೇಗುಲ, ದಲಿತ ಸಮುದಾಯದ ಬಬ್ಬುಸ್ವಾಮಿ ದೇಗುಲವೂ ಬಾರಕೂರಿನಲ್ಲಿದೆ. ಹಾಗಾದರೇ ಅಂದಿನ ರಾಜಾಡಳಿತದಲ್ಲಿ ಪ್ರಬಲ ಸಮುದಾಯವಾಗಿ ಸಂಸ್ಥಾನದಲ್ಲಿ ಗುರುತಿಸಲ್ಪಟ್ಟಿದ್ದ ಕುಂಬಾರ ಸಮುದಾಯಕ್ಕೆ ಸಂಬಂಧಪಟ್ಟ ದೇಗುಲವೊಂದು ಬಾರಕೂರಿನಲ್ಲಿ ಇರಲಿಲ್ಲವೆ? ಖಂಡಿತವಾಗಲೂ ಇದ್ದಿತ್ತು ಎಂಬ ವಾದ ನಮ್ಮದು. ತುಳುನಾಡಿನ ಸಮಸ್ತ ಕುಂಬಾರ ಸಮುದಾಯದ ಮೂಲ ನೆಲೆಯಾಗಿಯೂ ಈ ದೇವಸ್ಥಾನ ಬಾರಕೂರಿನಲ್ಲಿ ಅಸ್ತಿತ್ವದಲ್ಲಿ ಇತ್ತು ಎಂಬ ಗಟ್ಟಿ ಊಹೆ ನಮ್ಮದು. ಮಡಿಕೆ-ಕುಡಿಕೆಗಳದ್ದೆ ರಾಜ್ಯಭಾರ ಇದ್ದ ಆ ಕಾಲದಲ್ಲಿ ಕುಂಬಾರ ಸಮುದಾಯದವರು ತೌಳವ ನಾಡಿನಲ್ಲಿ ಅಗಾಧ ಪ್ರಮಾಣದಲ್ಲಿ ಇದ್ದರು. ಅವರ ಮೂಲ ದೇವಸ್ಥಾನವು ಬಾರಕೂರಿನಲ್ಲೆ ಇದ್ದು ಇತಿಹಾಸದ ದುರಂತ ದಾಳಿಗಳಿಗೆ ಸಿಕ್ಕಿ ಇದು ನಾಶವಾಗಿರಬಹುದಷ್ಟೆ!!
ಇತಿಹಾಸದ ದುರಂತಗಳಿಗೆ ಸಾಕ್ಷಿಯಾಗಿ ನಿಂತಿರುವ ಕಲ್ಲುಕಂಬ
ಇದು ಬರೀಯ ಊಹೆಯಲ್ಲ; ಸತ್ಯ!!
ಹಲವಾರು ವರ್ಷಗಳಿಂದ ಈ ಭಾಗದ ಕುಂಬಾರ ಸಮುದಾಯದ ಹಿರಿಯರು ಬಾರಕೂರಿನಲ್ಲಿ ನಮ್ಮ ಮೂಲ ದೇವರ ನೆಲೆ ಇತ್ತು ಎಂಬ ನಂಬುಗೆಯನ್ನು ಹೊಂದಿದ್ದರು. ಆದರೆ ಆ ನಂಬುಗೆ ಸತ್ಯ ಎಂದು ಸಾರುವ ಅಧೀಕೃತ ಮಾಹಿತಿ ನಮಗಿರಲಿಲ್ಲ ಅಷ್ಟೆ. ಆದರೆ ತೀರಾ ಇತ್ತೀಚೆಗೆ ಬಾರಕೂರು ಸಮೀಪದ ಮೂಡುಕೆರೆ ಎಂಬಲ್ಲಿ (ಬಾರಕೂರು ಸಂಯುಕ್ತ ಸಂಸ್ಥಾನದಲ್ಲಿ ಪ್ರಸಿದ್ದ ಹತ್ತು ಕೆರೆಗಳಲ್ಲಿ ಮೂಡುಕೆರೆಯು ಒಂದು. ಇದರ ದಂಡೆಯಲ್ಲೆ ಚಾಲುಕ್ಯ ಶೈಲಿಯ ಪ್ರಸಿದ್ದ ಸೋಮೇಶ್ವರ ದೇಗುಲ ಇದೆ) ಇರುವ ದೇವಸ್ಥಾನವೊಂದರಲ್ಲಿ ಆರೋಡ ಪ್ರಶ್ನೆಯನ್ನು ಇಡಲಾಗಿತ್ತು. ಇಲ್ಲಿ ತಿಳಿದು ಬಂದ ವಿಚಾರವೆಂದರೆ ಮೂಡುಕೆರೆ ದೇವಸ್ಥಾನದ ಸಮೀಪದಲ್ಲೆಲ್ಲೊ ಕುಂಬಾರ ಸಮುದಾಯಕ್ಕೆ ಸಂಬಂಧಪಟ್ಟ ದೇಗುಲವೊಂದು ಇದ್ದು ಅದು ಸಂಪೂರ್ಣ ನಶಿಸಿ ಹೋಗಿದೆ ಎನ್ನುವ ಸತ್ಯ. ಇದರ ಜಾಡನ್ನೇ ಅರಸಿ ಕೋಟ ಹೋಬಳಿ ಕುಲಾಲ ಸಮಾಜ ಸುಧಾರಕ ಸಂಘದ ಪಧಾಧಿಕಾರಿಗಳು ಮೂಡುಕೆರೆ ಸಮೀಪದಲ್ಲಿ ದೇಗುಲದ ಕುರುಹುಗಳಿಗಾಗಿ ಅರಸಿ ಹೊರಟೆವು.
ತೋಟದ ಮಧ್ಯೆ ಇರುವ ದೇವರ ಕಲ್ಲಿನ ಪೀಠ
ನಮಗೆ ಕಂಡದ್ದು ದೇವರ ಕಲ್ಲಿನ ಪೀಠ
ಬಾರಕೂರು ಮೂಡುಕೆರೆಯ ಬಲಭಾಗದಲ್ಲಿ ಬ್ರಾಹ್ಮಣ ಸಮುದಾಯದ ಖಾಸಗಿ ಮಾಲಿಕತ್ವದ ತೋಟವೊಂದರ ಮಧ್ಯದಲ್ಲಿ ದೇವರ ಕಲ್ಲಿನ ಪೀಠವೊಂದು ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಅಲ್ಲೆ ಸಮೀಪದಲ್ಲಿ ಪುರಾತನ ದೇವಸ್ಥಾನಕ್ಕೆ ಸಂಬಂಧಪಟ್ಟಂತಿರುವ ಬಾವಿಯೊಂದು ನಮಗೆ ಕಾಣಸಿಕ್ಕಿದೆ. ಆ ಬಾವಿಕಟ್ಟೆಯಲ್ಲಿ ಹಾಕಿರುವ ಚಪ್ಪಡಿ ತರಹದ ಕಲ್ಲುಗಳು ಬರೀಯ ಕಲ್ಲುಗಳಂತೆ ನಮಗೆ ಕಾಣುತ್ತಿಲ್ಲ. ಹೂವಿನ ಚಿತ್ತಾರವಿರುವ ಈ ಕಲ್ಲುಗಳು ದೇವಸ್ಥಾನಕ್ಕೆ ಸಂಬಂಧಪಟ್ಟ ಭಾಗಗಳಂತೆ ಕಾಣುತ್ತವೆ. ಬಟ್ಟೆ ಒಗೆಯಲೊ, ಪಾತ್ರೆ ತೊಳೆಯಲೊ ಸುಲಭವಾಗಲಿ ಎಂಬ ಕಾರಣಕ್ಕಷ್ಟೆ ಬಾವಿಕಟ್ಟೆಯಲ್ಲಿ ಇದನ್ನು ಹಾಸಲಾಗಿದೆ. ಮೂಡುಕೆರೆಯ ಸುತ್ತೆಲ್ಲ ನಶಿಸಿ ಹೋಗಿರುವ ದೇಗುಲಗಳ ಪಳೆಯುಳಿಕೆಗಳು ಅನಾಥವಾಗಿ ಬಿದ್ದಿವೆ. ಕಣ್ಣಿರುಗೆರೆಯುತ್ತಿವೆ. ಇದು ಧರ್ಮಾಕ್ರಮಣದ ಇತಿಹಾಸದ ಘೋರ ದುರಂತವಲ್ಲದೆ ಇನ್ನೇನು!?
ಇಲ್ಲೆ ಸಮೀಪದಲ್ಲಿ ಮನೆ ಮಾಡಿ ನಿಂತಿರುವ ತೀರಾ ವಯಸ್ಸಿನ ಒಬ್ಬ ಅಜ್ಜನ್ನನ್ನು ಮಾತನಾಡಿಸಿದರೆ ಇವತ್ತು ಬರೀಯ ಕಲ್ಲಿನ ಪೀಠ ಇರುವ ಜಾಗದಲ್ಲಿ ಬಹಳ ಹಿಂದೆ ಚಿಕ್ಕದಾದ ದೇವರ ಮೂರ್ತಿ ಇದ್ದದ್ದನ್ನು ಅವರು ಕಣ್ಣಾರೆ ನೋಡಿದ್ದಾರೆ. ಅದು ಸ್ತ್ರೀ ದೇವತೆಯ ಮೂರ್ತಿಯಾಗಿದ್ದು ಲಕ್ಷ್ಮಿಯೋ, ದಾಕ್ಷಾಯಿಣಿ ದೇವಿಯ ಮೂರ್ತಿಯಾಗಿದ್ದಿರಬಹುದು ಎಂಬ ಸುಳಿವನ್ನು ಆ ಅಜ್ಜ ನೀಡುತ್ತಾರೆ. ಆದರೆ ಅದು ಕುಂಬಾರ ಸಮುದಾಯದವರ ದೇವಸ್ಥಾನದ ಭಾಗವೇ ಎಂಬ ಪ್ರಶ್ನೆಗೆ ಅಜ್ಜನ ಬಳಿ ನಿಖರ ಉತ್ತರವಿಲ್ಲ. (ಕುಂಬಾರ ಸಮುದಾಯದ ಮೂಲ ದೇವರು ಲಕ್ಷ್ಮಿ ಎಂಬ ವಾದವೂ ಸಾಕಷ್ಟಿದೆ) ಇನ್ನು ಅನೇಕ ಸ್ಥಳೀಯ ಹಿರಿಯರನ್ನು ಮಾತನಾಡಿಸಿ ನೋಡಿದಾಗಲೂ ಇಲ್ಲೊಂದು ದೇವಸ್ಥಾನ ಇರುವುದರ ಬಗ್ಗೆ ಅಭಿಪ್ರಾಯ ಪಡುತ್ತಾರೆಯೇ ವಿನಃ ನಿಖರ ಮಾಹಿತಿ ಯಾರ ಬಳಿಯೂ ಇಲ್ಲ.
ಇದು ಕುಂಬಾರ ಸಮುದಾಯದ್ದೆ ದೇವಸ್ಥಾನ ಆಗಿರಬಹುದೆ.. ?
ಈ ಬಾರಕೂರು ಮೂಡುಕೆರೆಯ ಮೂರು ಭಾಗಗಳಲ್ಲೂ ದೇವಸ್ಥಾನಗಳಿದೆ. ನಾಲ್ಕನೆಯ ಭಾಗದಲ್ಲೂ(ಪೂರ್ವ ಭಾಗ) ದೇವಸ್ಥಾನ ಹಿಂದೆ ಇದ್ದೀರಬಹುದು. ಇತಿಹಾಸದ ದುರಂತಗಳಿಗೆ ಸಿಕ್ಕಿ ಅದು ನಾಶವಾಗಿ ಈಗ ಬರೀ ದೇವರ ಮೂರ್ತಿ ಕುಳ್ಳಿರಿಸುವ ಕಲ್ಲಿನ ಪೀಠ ಮಾತ್ರ ನಮಗೆ ಕಾಣ ಸಿಗುತ್ತದೆ. ಇಲ್ಲಿ ಬಹಳ ಮುಖ್ಯವಾಗಿ ನಾವು ಅರ್ಥ ಮಾಡಿಕೊಳ್ಳಬೇಕಾದದ್ದು ಈ ಮೂಡುಕೆರೆಯ ಸುತ್ತ ಗಾಣಿಗರಿಗೆ ಸಂಬಂಧಪಟ್ಟ ಗೋಪಾಲಕೃಷ್ಣ ದೇಗುಲವಿದೆ. ಸಮಗಾರರರಿಗೆ ಸಂಬಂಧಪಟ್ಟ ದೇಗುಲವೂ ಈ ಕೆರೆಯ ದಂಡೆಯಲ್ಲಿದೆ. ದೇವಾಡಿಗ ಸಮುದಾಯಕ್ಕೆ ಸಂಬಂಧಪಟ್ಟ ಏಕನಾಥೇಶ್ವರ ದೇಗುಲವೂ ಸಮೀಪದಲ್ಲಿದೆ. ಜೀರ್ಣ ಅವಸ್ಥೆಯಲ್ಲಿದ್ದ ಈ ಎಲ್ಲ ದೇಗುಲಗಳನ್ನು ಆಯಾಯ ಸಮುದಾಯದವರು ಹುಡುಕಿ ಜೀರ್ಣೋದ್ದಾರಗೈದಿದ್ದಾರೆ. ಹಾಗಾದರೆ ಈ ಮೂಡುಕೆರೆಯ ಯಾವುದೋ ಭಾಗದಲ್ಲೆ ಕುಂಬಾರ ಸಮುದಾಯದ ದೇವನೆಲೆಯೊಂದು ಯಾಕೆ ಇದ್ದಿರಬಾರದು.? ಮೂರ್ತಿ ನಶಿಸಿ ಬರೇ ಕಲ್ಲಿನ ಪೀಠ ಇರುವ ಈ ಸ್ಥಳದಲ್ಲೆ ಕುಂಬಾರ ಸಮುದಾಯದ ಆದಿ ದೇವರು ನೆಲೆಯಾಗಿ ಇದ್ದಿರಬಹುದೇ? ಇದಮಿತ್ತಂ ಎಂದು ಹೇಳಲು ನಮಗೆ ಸಾಧ್ಯವಾಗದಿದ್ದರೂ ಕುಲಾಲ ಸಮುದಾಯದ ದೈವಿ ನೆಲೆಯೊಂದು ಈ ಭಾಗದಲೆಲ್ಲೋ ಇದೆ ಎನ್ನುವುದು ಮಾತ್ರ ನಿತ್ಯ-ಸತ್ಯ. ಇದನ್ನು ಮಥಿಸಿ ಹೊರ ತೆಗೆಯಬೇಕಾದ ದೊಡ್ಡ ಜವಬ್ದಾರಿ ಕರಾವಳಿಯ ಸಮಸ್ತ ಕುಂಬಾರ ಸಮುದಾಯದ್ದು.
ತೋಟದ ಮಧ್ಯೆ ಇರುವ ದೇವರ ಕಲ್ಲಿನ ಪೀಠ ಸ್ಪಷ್ಟ ಚಿತ್ರಣ
ತುರ್ತಾಗಿ ಆಗಬೇಕಾದುದ್ದೇನು?
ಖಂಡಿತಾಗಿಯೂ ಬಾರಕೂರಿನ ಇದೇ ಯಾವುದೋ ಭಾಗಲ್ಲಿ ಕುಂಬಾರ ಸಮುದಾಯದ ದೈವೀ ನೆಲೆಯೊಂದು ಇರುವುದು ಖಚಿತ. ಇದಕ್ಕೆ ಕರಾವಳಿಯ ಸಮಸ್ತ ಕುಂಬಾರರು ಒಗ್ಗೂಡಿ ಗಮನಹರಿಸಬೇಕಾದ ಅಗತ್ಯವಿದೆ. ಕಾಡಿನ ಮೂಲೆಯೆಲೆಲ್ಲೋ ಹುದುಗಿ ಹೋಗಿರುವ ದೇಗುಲಗಳನ್ನು ಹುಡುಕಿ ಜೀರ್ಣೋದ್ದಾರ ಕೈಗೊಳ್ಳುವಂತೆ ಮಾಡುವ ತಾಕತ್ತಿರುವುದು ಅಷ್ಟಮಂಗಲ ಅಥವಾ ಆರೋಡ ಪ್ರಶ್ನೆಗೆ. ಕರಾವಳಿಯ ಸಮಸ್ತ ಕುಂಬಾರರೂ ಒಗ್ಗೂಡಿ ತೀರಾ ವೈಜ್ಞಾನಿಕವು ಕಾರಣಿಕವೂ ಆಗಿರುವ ಪ್ರಬಲ ಅಷ್ಟಮಂಗಲ ಯಾ ಆರೋಡ ಪ್ರಶ್ನೆಯನ್ನು ಮೂಡುಕೆರೆ ಭಾಗದಲ್ಲಿ ಇರಿಸಿ ಈ ಭಾಗದಲ್ಲಿ ಕುಂಬಾರರ ಮೂಲ ದೈವಿ ನೆಲೆಯಿರುವುದರ ಸತ್ಯವೆಷ್ಟು ಮಿಥ್ಯೆಯೆಷ್ಟು ಎನ್ನುವುದನ್ನು ತಿಳಿದುಕೊಳ್ಳಬೇಕಾದ ಅಗತ್ಯ ತುರ್ತಾಗಿ ಆಗಬೇಕಿದೆ.
ಖಂಡಿತಾ ಇದು ಒಂದು ಚಿಕ್ಕ ಸಂಘದಿಂದ ನಾಲ್ಕು ಜನರಿಂದ ಆಗುವ ಕೈಂಕರ್ಯವಲ್ಲ. ಕರಾವಳಿಯ ಹಿರಿ-ಕಿರಿಯ ಕುಂಬಾರ ಸಮುದಾಯವು ಒಗ್ಗೂಡಿ ಚರ್ಚಿಸಬೇಕಿದೆ. ಎಲ್ಲ ಸ್ವ ಜಾತಿ ಸಂಘಗಳು ಸಭೆ ಸೇರಿ ಮುಂದೇನು ಅನ್ನುವುದರ ಬಗ್ಗೆ ತಮ್ಮ ಸಂಘದಲ್ಲಿ ಅಜೆಂಡಾ ಕೈಗೊಳ್ಳಬೇಕಾಗಿದೆ. ದೇವಸ್ಥಾನವೊಂದರ ಅಭಿವೃದ್ದಿಯಾದರೆ ಸಮಸ್ತ ಕುಲಾಲರ ಅಭಿವೃದ್ದಿಯಾಗಲು ಬುನಾಧಿ ಸಿಕ್ಕಂತೆ. ದೇವಸ್ಥಾನದಂತಹ ಸೂಕ್ಷ್ಮ ವಿಷಯ ಬಂದರೆ ಕರಾವಳಿಯ ಹಳ್ಳಿ ಹಳ್ಳಿಯಲ್ಲು ಚದುರಿಹೋಗಿರುವ ಕುಲಾಲರನ್ನು ಒಂದೇ ಸೂರಿನಡಿಯಲ್ಲಿ ಒಗ್ಗೂಡಿಸಲು ಸಾಧ್ಯ. ಒಗ್ಗಟ್ಟು ಪ್ರದರ್ಶಿಸಲು ಸಾಧ್ಯ.
ಬಾವಿಕಟ್ಟೆಯಲ್ಲಿ ಹಾಸಿರುವ ಕಲ್ಲು..ತೋರುತ್ತಿರುವ ಚಿತ್ತಾಕರ್ಷಕ ಹೂವಿನ ಚಿತ್ತಾರ ಗಮನಿಸಿ
ಡಾ. ಅಣ್ಣಯ್ಯ ಕುಲಾಲ್ ಏನನ್ನುತ್ತಾರೆ?
ಕರಾವಳಿ ಕುಲಾಲ ಕುಂಬಾರ ಸಮುದಾಯದ ಹಿರಿಯ ನೇತಾರ, ಸಂಘಟಕ, ಪ್ರಾಧ್ಯಾಪಕ ಡಾ. ಅಣ್ಣಯ್ಯ ಕುಲಾಲ್ ಅವರು ಈ ಬಗ್ಗೆ ಪ್ರಶ್ನಿಸಿದರೆ ಹೀಗೆ ಪ್ರತಿಕ್ರೀಯಿಸುತ್ತಾರೆ. “ಕರಾವಳಿ ಕುಂಬಾರ ಸಮುದಾಯಕ್ಕೊಂದು ಗಟ್ಟಿ ಚಾರಿತ್ರಿಕ ನೆಲೆ ಬಾರಕೂರಿನಲ್ಲಿ ಇರಬಹುದಾದುರ ಬಗ್ಗೆ ಸಾಕಷ್ಟು ಅಧ್ಯಯನ ಕೈಗೊಳ್ಳಬೇಕಾದ ತುರ್ತು ಅಗತ್ಯ ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಕೋಟ ಹೋಬಳಿ ಕುಲಾಲ ಸಮಾಜ ಸುಧಾರಕ ಸಂಘ ಮತ್ತು ಬ್ರಹ್ಮಾವರ ಕುಲಾಲ ಸಂಘಗಳು ಕುಂಬಾರರ ಮೂಲ ನೆಲೆಯನ್ನು ಅರಸುವುದರ ಬಗ್ಗೆ ತೋರುತ್ತಿರುವ ಕಾಳಜಿ ಮತ್ತು ಆಸಕ್ತಿ ಮೆಚ್ಚತಕ್ಕುದ್ದು. ಬಹಳ ಮುಖ್ಯವಾಗಿ ಕುಲಾಲ ಕುಂಬಾರ ಸಮುದಾಯದ ಸ್ವಾಮೀಜಿಗಳು, ಧಾರ್ಮಿಕ ರಾಜಕೀಯ ನಾಯಕರುಗಳು, ಕುಂಬಾರ ಕುಲಾಲ ಸಮುದಾಯದ ಅದೀನ ದೇವಾಲಯದ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳು, ಕುಲಾಲ ಕುಂಬಾರ ಸಮುದಾಯದ ತುಳು ಕನ್ನಡ ಹಿರಿ-ಕಿರಿಯ ಬರಹಗಾರರು, ನಮ್ಮ ಸಮುದಾಯದ ಸರಕಾರಿ ಅಧಿಕಾರಿಗಳ ಬೇಟಿ ಮತ್ತು ಸಲಹೆ ಸಹಕಾರದಿಂದ ತುಳು ರಾಜಧಾನಿಯಲ್ಲಿ ಕುಂಬಾರರ ಮೂಲ ದೈವಿ ನೆಲೆಯನ್ನು ದೃಡಿಕರಿಸಬೇಕಾಗಿದೆ. ಕುಂಬಾರರು ಸಹ ತುಳುವಿನ ಅವಿಭಾಜ್ಯ ಅಂಗ ಅನ್ನುವುದನ್ನು ಪ್ರಚುರಪಡಿಸುವ ಕಾಲ ಸನ್ನಿಹಿತವಾಗಿದೆ” ಎನ್ನುತ್ತಾರೆ.
ಒಟ್ಟಿನಲ್ಲಿ ಹೇಳುವುದಾರೆ. ಕರಾವಳಿ ಕುಂಬಾರರ ಪ್ರಾಚೀನ ದೇವಸ್ಥಾವೊಂದು ತೌಳವ ನಾಡಿನ ರಾಜಧಾನಿ ಬಾರಕೂರಿನ ಮಣ್ಣಿನಡಿ ಮರೆಯಾಗಿ ಹೋಗಿರುವುದಂತು ನಿಚ್ಚಳ. ಅದನ್ನು ಲೋಕಕ್ಕೆ ತೆರೆದು ತೋರಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಕರಾವಳಿಯ ಸಮಸ್ತ ಕುಲಾಲರು ಈ ಬಗ್ಗೆ ಗಂಭೀರವಾಗಿ ಯೋಚಿಸುವುದೊಳಿತು!!
ಬರಹ : ಮಂಜುನಾಥ್ ಕುಲಾಲ್ ಹಿಲಿಯಾಣ
ಪೂರಕ ಮಾಹಿತಿ: ಅಧ್ಯಕ್ಷರು ಮತ್ತು ಪಧಾಧಿಕಾರಿಗಳು
ಕುಲಾಲ ಸಮಾಜ ಸುಧಾರಕ ಸಂಘ(ರಿ)ಶಿರಿಯಾರ ಮೆಕ್ಕೆಕಟ್ಟು
ಈ ಸ್ಥಳಗಳಿಗೆ ಭೇಟಿ ಕೊಡುವವರು ಯಾ ಹೆಚ್ಚಿನ ಮಾಹಿತಿ ಬಯಸುವವರು ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸತೀಶ್ ಕುಲಾಲ್ ನಡೂರು ಇವರನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ-9164677323








