ಮನಕಲಕುತ್ತೆ ಈ ಕುಟುಂಬದ ದಾರುಣ ಸ್ಥಿತಿ * ದಾನಿಗಳ ನೆರವಿನಿಂದ ಆಗಬೇಕಿದೆ ಸೂರಿಗೊಂದು ಕಾಯಕಲ್ಪ
ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಮುರುಕು ಮನೆಯಲ್ಲಿಈ ಮೂವರದ್ದು ಅಸಹಾಯಕ ಬದುಕು. ಮಾನಸಿಕವಾಗಿ ಕುಗ್ಗಿ ಹೋಗಿರುವ ಇವರ ದುಸ್ಥಿಯ ನೋಡಿದರೆ ಎಂಥವರ ಕರಳು ಚುರ್ ಎನ್ನದಿರದು. ಒಬ್ಬ ಮಾನಸಿಕ ಅಸ್ವಸ್ಥ ಸಹೋದರ ಮತ್ತು ಇಬ್ಬರು ಅವಿವಾಹಿತ ಸೋದರಿಯರು ಹಲವು ವರ್ಷಗಳಿಂದ ಮುರುಕು ಗುಡಿಸಲಿನಲ್ಲಿ ದಯನೀಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಉಳ್ಳವರಿಗೆ ಸರ್ಕಾರಿ ಮನೆ ನೀಡುವ ಶಾಸಕರು, ಸಂಸದರು, ಸ್ಥಳೀಯ ಜನಪ್ರತಿನಿಧಿಗಳಿಗೆ ಈ ಅಸಹಾಯಕ ಜೀವಗಳ ಗೋಳು ಕಾಣಿಸುತ್ತಿಲ್ಲ ಎನ್ನುವುದು ದುರಂತ!
ಇದು ಯಾವುದೋ ಕುಗ್ರಾಮದಲ್ಲಿರುವ ಕುಟುಂಬ ಸ್ಥಿತಿಯಲ್ಲ. ಹಲವಾರು ವಿಧದಲ್ಲಿ ಅಭಿವೃದ್ಧಿಯ ಪಥ ಹಿಡಿದಿರುವ ಬಜಪೆ ಸಮೀಪದ ಕೊಳಂಬೆ ಬೈಲು ಬೀಡು ಎಂಬಲ್ಲಿ ವಾಸವಿರುವ ದಿ. ತಿಮ್ಮಪ್ಪ ಮೂಲ್ಯ-ಹೊನ್ನಮ್ಮ ಎಂಬವರ ಮಕ್ಕಳಾದ ವೆಂಕಮ್ಮ(49), ಜಾನಕಿ (44) ಹಾಗೂ ತುಕಾರಾಮ (42) ಎಂಬವರ ಶೋಚನೀಯ ಬದುಕಿನ ಕಥೆ.
ಈ ಮೂವರ ತಂದೆ-ತಾಯಿ ಯಾವತ್ತೋ ತೀರಿಹೋಗಿದ್ದಾರೆ. ಹಿರಿಯರು ಯಾವುದೋ ಕಾಲದಲ್ಲಿ ನಿರ್ಮಿಸಿದ್ದ ಹಳೆ ಮನೆಯ ಮೇಲ್ಛಾವಣಿ ಎಂದೋ ಕುಸಿದು ಬಿದ್ದಿದೆ. ಈ ಮನೆಗೆ ವಿದ್ಯುತ್ ಇಲ್ಲ, ಶೌಚಾಲಯವಿಲ್ಲ, ಜೋರಾಗಿ ಸುರಿಯುವ ಮಳೆಗೆ ಒಳ ಹೊಕ್ಕುವ ನೀರನ್ನು ತಡೆಯಲು ಟರ್ಪಾಲು ಹಾಕಲಾಗಿದೆ. ಈ ಬಾರಿಯ ಮಳೆಗೆ ಒಂದು ಬದಿಯ ಮನೆ ಗೋಡೆ ಸಂಪೂರ್ಣ ಕುಸಿದು ಬಿದ್ದಿದೆ. ಆಗಲೋ ಈಗಲೋ ಮುರಿದು ಬೀಳುವ ಸ್ಥಿತಿಯಲ್ಲಿರುವ ಮುರುಕಲು ಮನೆಯಲ್ಲಿ ದಯನೀಯ ಪರಿಸ್ಥಿತಿಯಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿರುವ ವೆಂಕಮ್ಮ, ಜಾನಕಿ ಮತ್ತು ಹುಟ್ಟುವಾಗಲೇ ಮಾನಸಿಕ ಅಸ್ವಸ್ಥನಾಗಿರುವ ತುಕಾರಾಮ ನಿಕೃಷ್ಟ ರೀತಿಯಲ್ಲಿ ಬದುಕು ಸವೆಸುತ್ತಿದ್ದಾರೆ. ಬಂಧುಗಳಿದ್ದರೂ ನಿರ್ಲಕ್ಷ್ಯದಿಂದ ಮೂಲೆಗುಂಪಾಗಿರುವ ಈ ಕುಟುಂಬಕ್ಕೆ ದನಗಳೇ ಜೀವನಾಧಾರ. ದನ ಸಾಕುತ್ತಾ, ಹಾಲು ಮಾರಿ ಬಂಡ ಕಿಂಚಿತ್ ಹಣದಿಂದ ಕಷ್ಟದಿಂದ ಜೀವನ ಸಾಗಿಸುತ್ತಿದೆ. ಅತೀವ ದೈವ ಭಕ್ತರಾಗಿರುವ ಇವರಿಗೆ ವಯಸ್ಸು ದಾಟಿದರೂ ಕಂಕಣ ಭಾಗ್ಯ ಕೂಡಿ ಬರದೇ ಅವಿವಾಹಿತರಾಗಿಯೇ ಉಳಿದಿದ್ದು, ತುತ್ತು ಅನ್ನಕ್ಕೂ ಪರದಾಡುತ್ತಾ ಬದುಕು ನಡೆಸುತ್ತಿದ್ದಾರೆ. ಇತರ ನಾಗರೀಕ ಸಂಪರ್ಕದಿಂದ ದೂರ ಇದ್ದು, ಅನಾಥರಂತೆ ಜೀವನ ಸಾಗಿಸುತ್ತಿರುವುದರಿಂದ ಸ್ವಲ್ಪ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದು, ಕೆಲವೊಂದು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಇವರದ್ದು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ವಿರುವ ಪಕ್ಕದ ಊರಾದರೂ ಚಿಮಿಣಿ ದೀಪದ ಬೆಳಕಲ್ಲಿ ರಾತ್ರಿ ಕಳೆಯುವ ಈ ಕುಟುಂಬದ ಬಳಿ ಆಧಾರ್ ಕಾರ್ಡ್ ಬಿಟ್ಟರೆ ರೇಷನ್ ಕಾರ್ಡು ಕೂಡ ಇದ್ದಂತಿಲ್ಲ. ಹಲವು ವರ್ಷಗಳಿಂದ ಕೈಯಲ್ಲಿ ಬಿಡಿಗಾಸು ಇಲ್ಲದೇ ಇಂಥ ಶೋಚನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದರೂ ಯಾರೊಬ್ಬರೂ ಈ ಅನಾಥ ಜೀವಗಳಿಗೆ ಆಶ್ರಯ ಕಲ್ಪಿಸುವ ಕೆಲಸ ಮಾಡಿಲ್ಲ.
ಬಡವರಿಗಾಗಿ ಕೇಂದ್ರ, ರಾಜ್ಯ ಸರಕಾರಗಳು ಅನೇಕ ಯೋಜನೆಗಳನ್ನು ತಂದಿದ್ದರೂ ಅದು ಕಟ್ಟಕಡೆಯ ಕುಟುಂಬಕ್ಕೆ ತಲುಪುವುದಿಲ್ಲ ಎಂಬುದಕ್ಕೆ ಈ ಕುಟುಂಬ ತಾಜಾ ಉದಾಹರಣೆಯಾಗಿದೆ. ಹೊರ ಜಗತ್ತಿನ ನೆರಳು ಸೋಕದೆ ತಮ್ಮ ಕಷ್ಟವನ್ನು ಯಾರಲ್ಲೂ ಹೇಳಿಕೊಳ್ಳದ ಈ ಸಂಸಾರಕ್ಕೆ ಸಹೃದಯಿ ದಾನಿಗಳ ನೆರವು ಬೇಕಾಗಿದೆ. ಈ ಕುಟುಂಬಕ್ಕೊಂದು ಮನೆ ಕಟ್ಟಿಸಿಕೊಡಬೇಕೆಂದು ಪಣತೊಟ್ಟ ಸ್ಥಳೀಯ ಯುವ ಉತ್ಸಾಹಿ ಯುವಕ ಸುಧಾಕರ್ ಕೊಳಂಬೆ, ಕೆಲವರ ಸಹಕಾರದೊಂದಿಗೆ ತಳಪಾಯ ಹಾಕಿಕೊಟ್ಟಿದ್ದಾರೆ. ಇನ್ನುಳಿದ ಕಾಮಗಾರಿ ಪೂರ್ಣವಾಗಲು ಅವರಿವರ ನೆರವು ಕೋರುತ್ತಾ ಓಡಾಡುತ್ತಿದ್ದಾರೆ. ಮನೆ ಪೂರ್ಣವಾಗಬೇಕಾದರೆ ಸುಮಾರು ಮೂರು ಲಕ್ಷ ರೂ ಅಧಿಕ ಹಣದ ಅವಶ್ಯಕತೆ ಇದ್ದು , ಸಹೃದಯಿ ದಾನಿಗಳ ಬೆಂಬಲ, ಸಹಾಯದ ಅಗತ್ಯವಿದೆ.
ದಯನೀಯ ಸ್ಥಿತಿಯಲ್ಲಿರುವ ಈ ಅನಾಥ ಸಂಸಾರಕ್ಕೆ ಮಾನವೀಯತೆಯ ನೆಲೆಯಲ್ಲಿ ಸೂರು ಕಲ್ಪಿಸುವ ನೆಲೆಯಲ್ಲಿ “ಕುಲಾಲ್ ವರ್ಲ್ಡ್’ ವಾಟ್ಸಾಪ್ ಬಳಗ ಸಾಧ್ಯವಾದಷ್ಟು ನೆರವು ಸಂಗ್ರಹಿಸಿ ಕೊಡುವ ಸಂಕಲ್ಪ ಮಾಡಿದ್ದು, ಈ ಸತ್ಕಾರ್ಯಕ್ಕೆ ಸಹೃದಯವಂತರು ಸ್ಪಂದಿಸಿ ಧನ ಸಹಾಯದ ಮೂಲಕ ಸಹಕರಿಸಬೇಕಾಗಿದೆ. (ನೆರವು ನೀಡಿದವರ ವಿವರವನ್ನು http://www.kulalaworld.com ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು)
ಧನಸಹಾಯ ಮಾಡುವವರು ನಮ್ಮ `ಕುಲಾಲ್ ವರ್ಲ್ಡ್; ವಾಟ್ಸಪ್ ಗ್ರೂಪಿನ ನಿರ್ವಾಹಕರಾದ ಹೇಮಂತ್ ಕುಮಾರ್ ಅವರ ಈ ಕೆಳಗಿನ ಖಾತೆಗೆ ಹಣ ಜಮಾ ಮಾಡಬೇಕಾಗಿ ವಿನಂತಿ.
Name: Hemanth Kumar
Bank: HDFC Bank
IFSC code: HDFC0004892
A/C No : 50100174272852
Branch: Kinnigoli
Google Pay and Phone Pay: 9880922412
Contact: 9480922412 / 9880922412
ವಸ್ತುರೂಪದಲ್ಲಿ ಸಹಾಯ ಮಾಡಲು ಬಯಸುವವರು 98453 78949 (ಸುಧಾಕರ್ ಕೊಳಂಬೆ) ಅಥವಾ 9480922412 (ಹೇಮಂತ್ ಕುಮಾರ್) ಸಂಪರ್ಕಿಸಿ .