ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ ಅಂಗವಾಗಿ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿಯನ್ನು ಸಮಾಜ ಸೇವಕಿ ವೀಣಾ ಕುಲಾಲ್ ಅವರು ಪಡೆದುಕೊಂಡಿದ್ದಾರೆ.
ವೀಣಾ ಕುಲಾಲ್ ಸೇರಿದಂತೆ ಕರಾವಳಿಯ ವಿವಿಧ ಕ್ಷೇತ್ರಗಳ 24 ಸಾಧಕರಿಗೆ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿಯನ್ನು ನೀಡಲಾಗಿದ್ದು ಕಾವೂರಿನ ಬಿಜಿಎಸ್ ಸಭಾಂಗಣದಲ್ಲಿ ಮಂಗಳವಾರ ಪ್ರದಾನ ಮಾಡಲಾಯಿತು.
ಮಂಗಳೂರು ಆಕಾಶಭವನ ಸಮೀಪದದ ನಂದನಪುರ ಕೃಷ್ಣ ಕುಲಾಲ್ ಅವರ ಪತ್ನಿಯಾದ ವೀಣಾ ಕುಲಾಲ್ ಮಂಗಳೂರಿನ ಚೇತನಾ ಬಾಲ ವಿಕಾಸ ಕೇಂದ್ರದ ವಿಶೇಷ ಮಕ್ಕಳ ಶಾಲೆಯಲ್ಲಿ ಅಪಾರ ಶ್ರದ್ಧೆ, ಕಾಳಜಿ ಮತ್ತು ಸಮರ್ಪಣಾ ಭಾವದಿಂದ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಒಡಿಯೂರು ಗುರುದೇವಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಶಾಸಕ ಡಾ.ವೈ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ಸುಮಂಗಲಾ ಭಾಗವಹಿಸಿದ್ದರು. ಸಂಜೀವ ಮಠಂದೂರು ಸ್ವಾಗತಿಸಿದರು. ರಣದೀಪ್ ಕಾಂಚನ್ ಕಾವೂರು ಧನ್ಯವಾದ ಸಲ್ಲಿಸಿದರು. ಹೊಸದಿಗಂತ ಸಿಇಒ ಪಿ.ಎಸ್.ಪ್ರಕಾಶ್ ಪ್ರಸ್ತಾವಿಕವಾಗಿ ಮಾತನಾಡಿದರು.