ಇದು ದಯನೀಯ ಸ್ಥಿತಿಯಲ್ಲಿರುವ ಕುಟುಂಬದ ಮನಕಲಕುವ ಕರುಣಾಜನಕ ಕಥೆ!
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಿತ್ತು ತಿನ್ನುವ ಬಡತನ, ವಾಸಕ್ಕೆ ಮುರುಕಲು ಸೂರು ಬಿಟ್ಟರೆ ಇಳಿವಯಸ್ಸಿನಲ್ಲಿ ಆಸರೆಗಾಗಿ ಮಕ್ಕಳಿಲ್ಲ. ಕೂಲಿ ಮಾಡದ ಹೊರತು ಹೊಟ್ಟೆ ತುಂಬುವುದಿಲ್ಲ. ಇನ್ನೊಂದೆಡೆ ಗಾಯದ ಮೇಲೆ ಬರೆ ಎಳೆದಂತೆ ಮನೆಯ ಯಜಮಾನ ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಔಷಧೋಪಚಾರದ ಜತೆಗೆ ಒಪ್ಪೊತ್ತಿನ ಊಟಕ್ಕೂ ಪರದಾಡ ಬೇಕಾದ ದಯನೀಯ ಸ್ಥಿತಿಯಲ್ಲಿರುವ ಕುಟುಂಬದ ಮನಕಲಕುವ ಕರುಣಾಜನಕ ಕಥೆ ಇದು.. ಇವರ ಪರಿಸ್ಥಿತಿ ನೋಡಿದರೆ ಎಂತಹವರ ಕಣ್ಣಲ್ಲೂ ನೀರು ಚಿಮ್ಮದಿರದು.
ಪೊಳಲಿ ಸಮೀಪದ ಅಡ್ಡೂರು ಗ್ರಾಮದ ವಯೋವೃದ್ಧ ಕೃಷ್ಣ ಕುಲಾಲ್ ತನ್ನ ಪತ್ನಿ ವಸಂತಿ ಅವರ ಜೊತೆ ಪಣೋಲಿಪಾಡಿ ಎಂಬಲ್ಲಿ ವಾಸಿಸುತ್ತಿದ್ದು, ಅನಾರೋಗ್ಯ ಮತ್ತು ತೀರಾ ಆರ್ಥಿಕ ಸಂಕಷ್ಟದಿಂದ ಜರ್ಜರಿತರಾಗಿದ್ದಾರೆ. ಮದುವೆಯಾಗಿ ಹಲವು ವರ್ಷವಾದರೂ ಮಕ್ಕಳಾಗಿಲ್ಲ ಎನ್ನುವ ಚಿಂತೆ ಬಿಟ್ಟರೆ ಅವರ ಸಂಸಾರ ಚೆನ್ನಾಗಿಯೇ ಇತ್ತು. ಕೂಲಿ ಕಾರ್ಮಿಕರಾಗಿ ಬದುಕಿಗೆ ಆಧಾರವಾಗಿದ್ದ ಕೃಷ್ಣ ಕುಲಾಲ್ ಯಾವಾಗ ಗಂಟಲಿನ ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾದರೋ ಅಂದಿನಿಂದ ಸಂಕಷ್ಟ ಬೆನ್ನುಹತ್ತಿತು.
ದುಡಿದು ತಂದು ಹಾಕುತ್ತಿದ್ದ ಮನೆಗೆ ಆಧಾರಸ್ತಂಭವಾಗಿದ್ದ ಪತಿ ಅನಾರೋಗ್ಯಕ್ಕೆ ತುತ್ತಾಗಿ ಕಳೆದೊಂದು ವರ್ಷದಿಂದ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದು, ವೈದ್ಯಕೀಯ ವೆಚ್ಚ ಭರಿಸುವುದರ ಜತೆಗೆ ಎರಡು ಹೊತ್ತಿನ ಊಟಕ್ಕೂ ತತ್ವಾರವಾಗಿದೆ. ವಿಧಿಯ ಅಟ್ಟಹಾಸದಿಂದ ಪತಿ ಹಾಸಿಗೆ ಹಿಡಿದ ಬಳಿಕ ಬಡತನದ ಬೇಗೆಯಲ್ಲಿ ಬೆಂದುಂಡ ಕುಟುಂಬ ಖರ್ಚಿಗೆ ಹಣವಿಲ್ಲದೆ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ವಸಂತಿ ಅವರು ಪ್ರಸ್ತುತ ಬೀಡಿ ಕಟ್ಟುತ್ತ ಮನೆ ನಿಭಾಯಿಸಲು ಹೆಣಗಾಡುತ್ತಿದ್ದು, ಬಡತನದ ತೂಗುಯ್ಯಾಲೆಯಲ್ಲಿ ನಲುಗಿ ಹೋದ ಈ ಕುಟುಂಬ ಈಗ ಔಷಧೋಪಚಾರ ಹಾಗೂ ಸಂಸಾರ ಬಂಡಿಯನ್ನು ಸಾಗಿಸಲು ಆರ್ಥಿಕ ಸಹಾಯಕ್ಕೆ ಕೈಯೊಡ್ಡಿದೆ. ಬದುಕು ಸಾಗಿಸುದೇ ಕಷ್ಟದಾಯಕವಾದ ಪರಿಸ್ಥಿತಿಯಲ್ಲಿರುವ ಈ ಕುಟುಂಬ ಆರ್ಥಿಕ ಸಮಸ್ಯೆ ಹಾಗೂ ಅನಾರೋಗ್ಯದಿಂದ ಬಳಲಿ ಬೆಂಡಾಗಿದೆ. ಮುಂದಿನ ದಾರಿ ಏನೆಂಬ ಚಿಂತೆಯಲ್ಲಿರುವ ಕುಟುಂಬಕ್ಕೆ ಸಹೃದಯಿಗಳ ಸಹಾಯದ ಆವಶ್ಯಕತೆ ಇದ್ದು, ಉದಾರ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಸಹಾಯ ಮಾಡಲಿಚ್ಛಿಸುವ ದಾನಿಗಳು ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದು.
Vasanthi
Corporation Bank Polali Branch
A/c No.520101024938285
IFSC code : CORP0002982
Phone : 9901653380