ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಗಾಳಿ ಮಳೆ ಮತ್ತು ಸಿಡಿಲಿಗೆ ಮರ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದಾಗ, ವಿದ್ಯುತ್ ತಂತಿ ತುಂಡಾಗಿ ಬಿದ್ದಾಗ ಬಾಲಕಿ ಮೃತಪಟ್ಟ ಘಟನೆ ಕುಂಭ್ಡಾಜೆ ಏತಡ್ಕದಲ್ಲಿ ನಡೆದಿದೆ.
ಸೋಮವಾರ ಸಂಜೆ ಐದರ ಸುಮಾರಿಗೆ ಘಟನೆ ನಡೆದಿದ್ದು, ಕುಂಭ್ಡಾಜೆ ಏತಡ್ಕದ ಜಯರಾಮ ಮೂಲ್ಯರ ಅರ್ಪಿತಾ (6) ಮೃತ ಪಟ್ಟಿದ್ದಾಳೆ. ಈ ಸಂದರ್ಭ ಬಾಲಕಿಯೊಂದಿಗಿದ್ದ ತಾಯಿ ಜಯಂತಿ ಮೂಲ್ಯ ಅವರೂ ವಿದ್ಯುತ್ ಆಘಾತಕ್ಕೀಡಾಗಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏತಡ್ಕ ಯು.ಪಿ. ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಅರ್ಪಿತಾ ಶಾಲೆಯಿಂದ ಮನೆಗೆ ಬಂದು ಚಹಾ ಕುಡಿದ ಬಳಿಕ ತಾಯಿಯೊಂದಿಗೆ ಹಿತ್ತಿಲಿನಲ್ಲಿ ನಡೆದು ಹೋಗುತ್ತಿದ್ದಾಗ ಗಾಳಿ ಮತ್ತು ಸಿಡಿಲಿನ ಆಘಾತಕ್ಕೆ ಮರ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದಿತ್ತು. ವಿದ್ಯುತ್ ತಂತಿ ಬಿದ್ದಾಗ ತಾಯಿ-ಮಗಳಿಗೆ ಶಾಕ್ ತಗಲಿತ್ತು. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಬಾಲಕಿ ಮೃತಪಟ್ಟಿದ್ದಾಳೆ.
ಅರ್ಪಿತಾ ಹೆತ್ತವರು ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾಳೆ. ಬಾಲಕಿ ತಂದೆ ಕಟ್ಟಡ ಕಾರ್ಮಿಕರಾಗಿದ್ದು, ತಾಯಿ ಅಂಗನವಾಡಿ ಸಹಾಯಕಿಯಾಗಿದ್ದಾರೆ.
ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.