ಬ್ರಹ್ಮಾವರ: ಬಸ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರರಾದ ಆಲುಂಜೆಯ ಅನಿಲ್ ಕುಲಾಲ್ (32) ಹಾಗೂ ಭಾಸ್ಕರ ಕುಲಾಲ್ (55) ಮೃತಪಟ್ಟ ಘಟನೆ ಗುರುವಾರ ಚೇರ್ಕಾಡಿ ಮುಂಡಿನಜಡ್ಡಿನಲ್ಲಿ ಸಂಭವಿಸಿದೆ.
ಬ್ರಹ್ಮಾವರದಿಂದ ಹೆಬ್ರಿ ಕಡೆ ತೆರಳುತ್ತಿದ್ದ ಬಸ್ ಹೆಬ್ರಿಯಿಂದ ಬರುತ್ತಿದ್ದ ಸ್ಕೂಟಿಗೆ ಢಿಕ್ಕಿಯಾಗಿದೆ. ತೀವ್ರ ಗಾಯಗೊಂಡ ಸವಾರರನ್ನು ಬ್ರಹ್ಮಾವರದ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ. ಅನಿಲ್ ಕುಲಾಲ್ ಅವರ ಪತ್ನಿ ಬಾಣಂತಿಯಾಗಿದ್ದು, ಅವರಿಗೆ ಒಂದೂವರೆ ತಿಂಗಳ ಹೆಣ್ಣು ಮಗುವಿದೆ. ಭಾಸ್ಕರ ಕುಲಾಲ್ ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಮೃತಪಟ್ಟವರು ಹತ್ತಿರದ ಸಂಬಂಧಿಗಳಾಗಿದ್ದರು. ಅವರು ಹೆಬ್ರಿಯಲ್ಲಿ ಗಾರೆ ಕೆಲಸ ಮುಗಿಸಿ ಆಲುಂಜೆಯ ಮನೆಗೆ ವಾಪಸಾಗುತ್ತಿದ್ದರು.
ಯಾವಾಗಲೂ ಪಲ್ಸರ್ನಲ್ಲಿ ತೆರಳುತ್ತಿದ್ದ ಅನಿಲ್ ಕುಲಾಲ್ ಗುರುವಾರ ಸ್ಕೂಟಿ ತೆಗೆದುಕೊಂಡು ಹೋಗಿದ್ದರು. ಮಳೆ ಬರುತ್ತಿದ್ದುದೂ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.