ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ವೆಲ್ಡಿಂಗ್ ಕೆಲಸ ಮಾಡುವ ವೇಳೆ ತಾಂತ್ರಿಕ ಕಾರಣಗಳಿಂದ ಗಂಭೀರ ಗಾಯಗೊಂಡ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಮೃತ ದುರ್ದೈವಿಯನ್ನು ಕಾಮಾಜೆ ನಿವಾಸಿ ಸುರೇಶ್ ಕುಲಾಲ್( 45) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಸುರೇಶ್ ಕುಲಾಲ್ ಅವರು ಮಂಗಳೂರಿನ ಖಾಸಗಿ ವೆಲ್ಡಿಂಗ್ ಶಾಪ್ ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕಳೆದ ಅ.29ರ ಶುಕ್ರವಾರವೂ ಎಂದಿನಂತೆ ಲಿಕೇಜ್ ಸಮಸ್ಯೆಗೆ ಸಂಬಂಧಿಸಿದಂತೆ ಪೆಟ್ರೋಲ್ ಟ್ಯಾಂಕರ್ ಒಂದರ ಮೇಲೆ ಕುಳಿತು ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಆದರೆ ಯಾವುದೋ ತಾಂತ್ರಿಕ ಕಾರಣಗಳಿಂದ ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡು ಸುರೇಶ್ ಕುಲಾಲ್ ಜೊತೆ ನಾಲ್ವರು ಗಾಯಗೊಂಡಿದ್ದರು. ಗಂಭೀರ ಗಾಯಗೊಂಡ ಸುರೇಶ್ ಕುಲಾಲ್ ಅವರನ್ನು ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯರಾತ್ರಿ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದ ಸುರೇಶ್ ಕುಲಾಲ್ ನಿಧನದಿಂದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.