ಮಂಗಳೂರು(ಮೇ.೨೮, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ (56) ನಿಧನರಾಗಿದ್ದಾರೆ. ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಸೋಮವಾರ ಮುಂಜಾನೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದವರಾದ ಇವರು 1984ರಲ್ಲಿ ‘ಮುಂಗಾರು’ ಪತ್ರಿಕೆ ಮೂಲಕ ಪತ್ರಿಕಾ ಛಾಯಾಗ್ರಹಣ ವೃತ್ತಿ ಆರಂಭಿಸಿದ್ದರು. 1996ರಲ್ಲಿ ಬೆಂಗಳೂರಿನಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕಾ ಬಳಗ ಸೇರಿದ ಇವರು ಹಲವು ವರ್ಷಗಳ ಕಾಲ ಛಾಯಗ್ರಾಹಕರಾಗಿ ಸೇವೆ ಸಲ್ಲಿಸಿದ್ದರು. ಇದಾದನಂತರ ಫ್ರೀಲ್ಯಾನ್ಸ್ ಪತ್ರಿಕಾ ಛಾಯಗ್ರಾಹಕರಾಗಿ ದಿ ಟೆಲಿಗ್ರಾಫ್ , ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳಿಗೆ ದುಡಿದಿದ್ದಾರೆ.
ಕ್ಯಾಮೆರಾ ಕಣ್ಣಿನಿಂದ ಹೊಸ ಲೋಕ ತೋರಿಸಿಕೊಟ್ಟಿದ್ದ ಕೇಶವ ವಿಟ್ಲ Facets of Karnataka – A Pictorial Journey ಕೃತಿಯ ಮೂಲಕ ಕರ್ನಾಟಕದ ಹೊಸ ಒಳನೋಟಗಳನ್ನು ಸೆರೆಹಿಡಿದಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ಶ್ರೇಷ್ಠ ಸುದ್ದಿ ಛಾಯಾಗ್ರಾಹಕ ಪ್ರಶಸ್ತಿ , ಬೆಂಗಳೂರು ಪ್ರೆಸ್ ಕ್ಲಬ್ನ ಜೀವಮಾನ ಸಾಧನೆಗಾಗಿ ಪ್ರಶಸ್ತಿ , ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಬಲಿಯೇಂದ್ರ ಪುರಸ್ಕಾರ , ತುಳುನಾಡ ಸಿರಿ ಪ್ರಶಸ್ತಿ ಪುರಸ್ಕೃತರಾಗಿರುವ ಕೇಶವ ವಿಟ್ಲ ಅವರು ಹಲವು ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನಗಳನ್ನು ಆಯೋಜಿಸಿದವರು. ಇಂದು ಮಧ್ಯಾಹ್ನ 2 ಗಂಟೆಗೆ ವಿಟ್ಲದ ಬೊಬ್ಬೆಕೇರಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಕೇಶವ್ ಅವರು ಅವಿವಾಹಿತರು.
—————————–