ಸಮಾಜದ ಬಂಧುಗಳ ಆಶೋತ್ತರಗಳಿಗೆ ಸ್ಪಂದಿಸಿ ಅಶಕ್ತರಿಗೆ ಆರ್ಥಿಕ ಸಹಾಯ, ಬಡವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಾ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನು ಬೆಳಸಿಕೊಂಡು ಸಮಾಜದ ಬಂಧುಗಳ ಪ್ರೀತಿಯನ್ನು ಗಳಿಸಿ ಕೊಂಡು ಕುಲಾಲ ಸಂಘವು ಉತ್ತಮ ಸೇವಾ ಚಟುವಟಿಕೆಯನ್ನು ಮಾಡುತ್ತಿರುವುದು ಶ್ಲಾಘನೀಯ -ನಡುಬೊಟ್ಟು ಕ್ಷೇತ್ರದ ಧರ್ಮದರ್ಶಿ ರವಿ. ಎನ್.
ಮಂಗಳೂರು(ಮೇ.೨೧, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಫರಂಗಿಪೇಟೆ ಕುಲಾಲ ಸುಧಾರಕ ಸಂಘವು ೨೫ ವರ್ಷ ಪೂರೈಸಿದ ಸಲುವಾಗಿ ಸಂಘದ `ರಜತ ಸಂಭ್ರಮ’ವು ಮೇ 19 ಮತ್ತು 20 ರಂದು ವಿಜೃಂಭಣೆಯಿಂದ ನಡೆಯಿತು.
ಮೇ 19ರಂದು ಬೆಳಿಗ್ಗೆ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ನಂತರ ವಾರ್ಷಿಕ ಮಹಾಸಭೆ ನಡೆಡಿದ್ದು, ಸಂಜೆ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ-ಸಾಹಿತ್ಯ-ಸಂಭ್ರಮ ಎಂಬ ವಿನೂತನ ಶೈಲಿಯ ಕಾರ್ಯಕ್ರಮ ನಡೆಯಿತು.
ಮೇ 20ರಂದು ಸಂಜೆ ಸಭಾ ಕಾರ್ಯಕ್ರಮದಲ್ಲಿ ನಡುಬೊಟ್ಟು ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ರವಿ ಎನ್., ರಜತ ಸಿಂಧೂರ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ದ.ಕ ಜಿಲ್ಲಾ ಕುಲಾಲ ಮಾತೃ ಸಂಘದ ಅಧ್ಯಕ್ಷ ಸುಜೀರು ಕುಡುಪು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯುವ ಉದ್ಯಮಿ, ಕರವೇ ಮುಖಂಡ ಅನಿಲ್ದಾಸ್, ಕುಲಶೇಖರ ವೀರನಾರಾಯಣ ಸೇವಾ ಟ್ರಸ್ಟ್ನ ಅಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್, ಸಮಾಜ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಲಾಲ್, ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಡಿ. ಎಂ. ಕುಲಾಲ್, ಶೇಷಪ್ಪ ಮಾಸ್ತರ್ ಮೊದಲಾದವರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಕೃಷಿಕ ಪೂವಪ್ಪ ಬಂಗೇರ, ನಾಟಕ ಮತ್ತು ತುಳು ಸಿನಿಮಾ ನಟ ಪಾಂಡುರಂಗ ಕುಲಾಲ್ ಮೊದಲಾದವರನ್ನು ಸನ್ಮಾನಿಸಲಾಯಿತು. ಪುದು ಗ್ರಾಮ ಪಂಚಾಯತ್ ಸದಸ್ಯೆ ನಾಗವೇಣಿ ಹರಿಶ್ಚಂದ್ರ ಕುಲಾಲ್ರವರನ್ನು ಅಭಿನಂದಿಸಲಾಯಿತು.
2017ರಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕು. ಶ್ರೇಯಾ ಅಡ್ಯಾರ್, ಕು. ಯಕ್ಷಿತಾ ಪೊನ್ನೋಡಿ, ಕು. ಪ್ರತಿಭ ದೇವಸ್ಯ ಮಾರಿಪಳ್ಳ, ಕು. ಧನ್ಯಶ್ರೀ ರೊಟ್ಟಿಗುಡ್ಡೆ ಪುದುರವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ರಾತ್ರಿ ನಮ್ಮ ಕಲಾವಿದೆರ್ ನೆಲ್ಯಾಡಿ ಇವರಿಂದ `ಪನ್ಪಿನಕ್ಲು ಪನ್ಪೆರ್’ ಎಂಬ ನಾಟಕ ಪ್ರದರ್ಶನಗೊಂಡಿತು.