ಮಂಜೇಶ್ವರ(ಮೇ.೧೯, ಕುಲಾಲ್ ವರ್ಲ್ಡ್ ನ್ಯೂಸ್): ಮಾರಣಾಂತಿಕ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಜೀವನ್ಮರಣ ಹೋರಾಟದಲ್ಲಿದ್ದ ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ನಿವಾಸಿ ವಿಶ್ವನಾಥ ಮೂಲ್ಯ ಅವರ ಪತ್ನಿ ಗೀತಾ ಸಾಲ್ಯಾನ್ (50ವರ್ಷ) ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕೂಲಿ ಕೆಲಸ ಮಾಡಿ ಬದುಕು ನಿರ್ವಹಿಸುತ್ತಿದ್ದ ಕಡುಬಡ ಕುಟುಂಬದ ಗೀತಾ ಸಾಲ್ಯಾನ್ (50ವರ್ಷ) ಅವರು ಕಳೆದ ಮೂರು ವರ್ಷದ ಹಿಂದೆ ಎಲುಬು ಕ್ಯಾನ್ಸರ್ ಗೆ ತುತ್ತಾಗಿದ್ದು, ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಹಣ ಹೊಂದಿಸಲು ದಿಕ್ಕು ತೋಚದೆ ಚಿಂತೆಯಲ್ಲೇ ದಿನ ದೂಡುತ್ತಿದ್ದ ಇವರ ಸ್ಥಿತಿಯ ಕುರಿತು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿತ್ತಲ್ಲದೇ `ಕುಲಾಲ್ ವರ್ಲ್ಡ್’ ವಾಟ್ಸಪ್ ಮಿತ್ರರು ಸೇರಿ 46,500ರೂ. ಸಂಗ್ರಹಿಸಿ ನೀಡಿದ್ದರು. ಕಲಾವಿದ ರಾಜೇಶ್ ಮುಗುಳಿ ನೇತೃತ್ವದ `ಕುಲಾಲ ಹಸ್ತ’ ಮಿತ್ರರ ಬಳಗ ಕೂಡಾ ಗೀತಾ ಅವರ ಸಂಕಷ್ಟಕ್ಕೆ ಮಿಡಿದು ಹಣ ಸಂಗ್ರಹಿಸಿ ನೀಡಿದ್ದರು. ಇವೆಲ್ಲವೂ ತತ್ಕಾಲಕ್ಕೆ ಉಪಯೋಗಕ್ಕೆ ಬಂದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೇ.೧೮ರಂದು ಅವರು ವಿಧಿಲೀಲೆಗೆ ಬಲಿಯಾದರು.
ಹಿಂದೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಆಯ ಆಗಿ ಕೆಲಸ ಮಾಡುತ್ತಾ, ಊರಿನಲ್ಲಿ ಈ ಹಿಂದೆ ಸಮಾಜಸೇವಕಿಯಾಗಿ ಗುರುತಿಸಿಕೊಂಡು, ಊರವರ ನೆರವಿಗೆ ಧಾವಿಸುತ್ತಿದ್ದ ಗೀತಾ ಅವರ ಆತ್ಮಕ್ಕೆ ಸದ್ಗತಿ ನೀಡಲಿ. ಪರಮಾತ್ಮ ಅವರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ನೀಡಲಿ.