ಕಾರ್ಕಳ(ಏ.೨೯, ಕುಲಾಲ್ ವರ್ಲ್ಡ್ ನ್ಯೂಸ್): ಕಿಡ್ನಿ ಕ್ಯಾನ್ಸರಿನಿಂದ ಬಳಲುತ್ತಿರುವ ಬಡ ಕುಟುಂಬದ ಯುವಕನಿಗೆ ಸಹೃದಯಿ ಗ್ರೂಪ್ ಆಫ್ ಚಾರಿಟಿ ವತಿಯಿಂದ ಧನ ಸಹಾಯವನ್ನು ನೀಡಲಾಯಿತು.
ಕಾರ್ಕಳದ ಸಾಣೂರಿನ ನಿವಾಸಿ ಸುಂದರ ಮೂಲ್ಯ ಮತ್ತು ಸುಂದರಿ ಅವರ ಪುತ್ರ ಸಂತೋಷ ಮೂಲ್ಯ ಕುಟುಂಬದ ಜೊತೆ ಅತ್ಯಂತ ಚಟುವಟಿಕೆಯಿಂದ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಕುಟುಂಬಕ್ಕೆ ಆಸರೆಯಾಗಿದ್ದರು. ಅದೊಂದು ದಿವಸ ಬೆನ್ನು ನೋವು ಕಾಣಿಸಿಕೊಂಡಿದ್ದು ಬಳಿಕ ಅದು ಉಲ್ಬಣಗೊಳ್ಳುತ್ತಾ ಹೋಯಿತು. ಸ್ಥಳೀಯ ವೈದ್ಯರ ಸಲಹೆಯ ಮೇರೆಗೆ ಔಷಧಿ ತೆಗೆದುಕೊಂಡರೂ ನೋವು ವಾಸಿಯಾಗಲಿಲ್ಲ. ಕಡೆಗೆ ಉನ್ನತ ಪರೀಕ್ಷೆ ನಡೆಸಿದಾಗ ಸಂತೋಷ ಅವರು ಕಿಡ್ನಿ ಕ್ಯಾನ್ಸರಿಗೆ ಬಲಿಯಾಗಿರುವುದು ತಿಳಿದು ಬಂತು. ಚಿಕಿತ್ಸೆಗಾಗಿ ಹಣವಿಲ್ಲದೆ ಕಂಗಾಲಾಗಿರುವ ಸಂತೋಷ ಎಲುಬಿನ ಗೂಡಿನಂತೆ ಹಾಸಿಗೆಯಲ್ಲಿ ನಿಶ್ಯಕ್ತನಾಗಿದ್ದು, ನಡೆದಾಡಲು ಬಿಡಿ, ಹಾಸಿಗೆಯಲ್ಲಿ ಹೊರಳಾಡಲು ಆಗದೆ ಸಹೃದಯಿಗಳ ಆರ್ಥಿಕ ಸಹಕಾರವನ್ನು ತನ್ನ ನೀರಸ ಕಣ್ಣುಗಳಲ್ಲಿ ಎದುರು ನೋಡುತ್ತಿದ್ದಾರೆ.
ಇವರ ಸಂಕಷ್ಟಮಯ ಸ್ಥಿತಿಯನ್ನು ತಿಳಿದ ಸಹೃದಯಿ ಗ್ರೂಪ್ ನ ಸದಸ್ಯರು ಹತ್ತು ಸಾವಿರ ರೂ. ನೆರವು ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭ ಸಂತೋಷ್ ಕುಮಾರ್, ಶರತ್ ಹಾಗೂ ರಂಜಿತ್ ಉಪಸ್ಥಿತರಿದ್ದರು.