ಬೆಂಗಳೂರು(ಏ.೦೩, ಕುಲಾಲ್ ವರ್ಲ್ಡ್ ನ್ಯೂಸ್): ಮುಲ್ಕಿ-ಮೂಡಬಿದ್ರೆವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕುಲಾಲ ಸಮುದಾಯದ ಸೌಂದರ್ಯ ರಮೇಶ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಹಿರಿಯ ಜೆಡಿಎಸ್ ನಾಯಕ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿಯವರು ಈ ಬಾರಿಯ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡದಿರುವ ನಿರ್ಧಾರ ತೆಗೆದುಕೊಂಡಿರುವುದು ಕ್ಷೇತ್ರಕ್ಕೆ ಓರ್ವ ಬಲಿಷ್ಠ ಹೊಸ ಮುಖದ ಹುಡುಗಾಟದಲ್ಲಿ ಜೆಡಿಎಸ್ ಪಕ್ಷ ನಿರತವಾಗಿತ್ತು. ಈ ಸ್ಥಾನಕ್ಕೆ ಇದೀಗ ಉದ್ಯಮಿ ಸೌಂದರ್ಯ ರಮೇಶ್ ಅವರ ಆಯ್ಕೆ ನಡೆದಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಮೂಡಬಿದ್ರಿ ಕ್ಷೇತ್ರದಲ್ಲಿ ಸತತ ಗೆಲುವಿನೊಂದಿಗೆ ಭದ್ರವಾಗಿ ಬೇರೂರಿರುವ ಕಾಂಗ್ರೆಸ್ ಮತ್ತು ಬೆಳೆಯುತ್ತಿರುವ ಬಿಜೆಪಿ ಪಕ್ಷಕ್ಕೆ ಸಡ್ಡು ಹೊಡೆಯಲು ಹಾಗು ಮೂಡಬಿದ್ರಿ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಗತ ವೈಭವವನ್ನು ಮರಳಿ ಗಳಿಸುವ ಪ್ರಯತ್ನದಲ್ಲಿ ಓರ್ವ ಸಮರ್ಥ ನಾಯಕನ ಹುಡುಕಾಟದಲ್ಲಿರುವಾಗಲೇ ರಮೇಶ್ ಅವರು ಸೂಕ್ತ ಅಭ್ಯರ್ಥಿಯಾಗಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಸೌಂದರ್ಯ ರಮೇಶ್ ಅವರು ಓರ್ವ ಯಶಸ್ವಿ ಉದ್ಯಮಿಯಾಗಿ, ಸೌಂದರ್ಯ ಓಂ ಸಾಯಿ ಸೌಹಾರ್ದ ಸಹಕಾರಿ ಸಂಘದ ಸ್ಥಾಪಕರಾಗಿ, ಕಟೀಲು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಅಲ್ಲದೆ ಸಮಾಜಸೇವಕರಾಗಿ ಮಹತ್ವದ ಸೇವೆ ನೀಡಿ ಪ್ರಸಿದ್ಧಿ ಪಡೆಡಿದ್ದಾರೆ.