(ಕುಲಾಲ್ ವರ್ಲ್ಡ್ ಡಾಟ್ ಕಾಮ್)
“ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ ಜಾತಿ ವಿಜಾತಿ ಎನಬೇಡ ಶಿವನೊಲಿದಾತನೆ ಜಾತ ಸರ್ವಜ್ಞ”
“ಸರ್ವಜ್ಞ ನೆಂಬುವನು ಗರ್ವದಿಂದಾದವನೆ ಸರ್ವರೊಳಗೊಂದು ನುಡಿಗಲಿತು ವಿದ್ಯೆಯಾ ಪರ್ವತವೇ ಆದ ಸರ್ವಜ್ಞ”
“ಹರನೆಂಬ ದೈವ ನಮಗುಂಟು, ತಿರಿವರಿಂ ಸಿರಿವಂತರಾರು ಸರ್ವಜ್ಞ”
“ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು ಹಿಂಡನಗಲಿದ ಗಜದಂತೆ ಇಪ್ಪವನ ಕಂಡು ನಂಬುವುದು ಸರ್ವಜ್ಞ”
ಎಮ್ಮೆ ಹಯನವು ಲೇಸು | ಕಮ್ಮನಾಮ್ಲವು ಲೇಸು |
ಸುಮ್ಮನೆಯ ಒಡವೆ ಬರಲೇಸು ಊರಿಂಗೆ | ಕಮ್ಮಾರ ಲೇಸು ಸರ್ವಜ್ಞ ||
ಹಡಗು ಗಾಳಿಗೆ ಲೇಸು | ಗುಡುಗು ಮಳೆ ಬರಲೇಸು | ಒಡಹುಟ್ಟಿದವರು ಇರಲೇಸು, ಊರಿಂಗೆ ಬಡಿಗೆ ಲೇಸಂದ ಸರ್ವಜ್ಞ ||
ಅಂಬು ಬಿಲ್ಲಿಗೆ ಲೇಸು | ಇಂಬು ಕೋಣೆಗೆ ಲೇಸು | ಸಂಬಾರ ಲೇಸು ಸಾರಿಗಂ ಊರಿಂಗೆ | ಕುಂಬಾರ ಲೇಸು ಸರ್ವಜ್ಞ ||
ಅಗಸ ಊರಿಗೆ ಲೇಸು | ಸೊಗಸು ಬಾಳುವೆ ಲೇಸು | ಬೊಗಸೆಯುಳ್ಳವರ ಗೆಣೆ ಲೇಸು ಊರಿಂಗೆ | ಅಗಸ ಲೇಸೆಂದ ಸರ್ವಜ್ಞ ||
16ನೇ ಶತಮಾನದಲ್ಲಿ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ವಚನಕಾರ, ದಾರ್ಶನಿಕ ಕವಿ ಸರ್ವಜ್ಞನ ಜಯಂತಿ ಆಚರಣೆ ಮಾಡಲಾಗುತ್ತಿದೆ. ಹಾವೇರಿ ಜಿಲ್ಲೆಯ ಅಬಲೂರು ಸರ್ವಜ್ಞನ ಜನ್ಮಸ್ಥಳ. ಜನರ ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ಚಿಕಿತ್ಸಕ ನೋಟದೊಂದಿಗೆ ತಿದ್ದಿದ ಸಮಾಜ ಸುಧಾರಕ. ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ.
ಇಂದು ರಾಜ್ಯದೆಲ್ಲಡೆ ಇಂದು (ಫೆ.೨೦) ಸರ್ವಜ್ಞನ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಜೆಸಿ ರಸ್ತೆಯ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ವಜ್ಞ ಜಯಂತಿ ಆಚರಣೆ ಹಮ್ಮಿಕೊಂಡಿದೆ. ಅಲ್ಲದೆ ವಿವಿಧ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸರ್ವಜ್ಞನ ಜನ್ಮದಿನಾಚರಣೆಯನ್ನು ಆಚರಿಸಲು ಸರಕಾರ ಆದೇಶ ಹೊರಡಿಸಿದೆ.