ಶಿರ್ವ(ಫೆ. ೦೬, ಕುಲಾಲ್ ವರ್ಲ್ಡ್ ನ್ಯೂಸ್): ಶಿರ್ವದಿಂದ ಕಾರ್ಕಳ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸು ಮೂಡಿಗೆರೆ ಗೋಣಿಬೀಡು ಬಳಿಯ ರಸ್ತೆ ತಿರುವಿನಲ್ಲಿ ಪಲ್ಟಿಯಾಗಿ ಶಿರ್ವದ ಮಹಿಳೆಯೊಬ್ಬರು ಮೃತಪಟ್ಟು, ಎಂಟು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಮೃತ ಮಹಿಳೆಯನ್ನು ಶಿರ್ವ ಕುತ್ಯಾರು ಕರ್ಮಾರುಜಿಡ್ಡು ನಿವಾಸಿ ಸಂದೀಪ್ ಕುಲಾಲ್ ಅವರ ಪತ್ನಿ ಭವ್ಯಾ (೨೬) ಎಂದು ಗುರುತಿಸಲಾಗಿದ್ದು, ಸಂದೀಪ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಸಂದೀಪ್ ಅವರು ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದು, ಎರಡು ವರ್ಷದ ಹಿಂದೆ ಕಾರ್ಕಳ ಇನ್ನಾದ ಭವ್ಯಾ ಅವರನ್ನು ವಿವಾಹವಾಗಿದ್ದರು. ಕಂಪೆನಿಯ ಕೆಲಸ ನಿಮಿತ್ತ ವಿದೇಶಕ್ಕೂ ತೆರಳಿದ್ದ ದಂಪತಿ ಬೆಂಗಳೂರಿಗೆ ವಾಪಸಾಗಿ ಅಲ್ಲೇ ನೆಲೆಸಿದ್ದರು. ಇತ್ತೀಚೆಗೆ ಪೂಜೆಗೆಂದು ಊರಿಗೆ ಬಂದು ರವಿವಾರದಂದು ಬೆಂಗಳೂರಿಗೆ ವಾಪಸಾಗುತ್ತಿದ್ದ ಸಂದರ್ಭ ಈ ದುರಂತ ಸಂಭವಿಸಿದೆ.