ಮಂಗಳೂರು(ಜ.೩೦, ಕುಲಾಲ್ ವರ್ಲ್ಡ್ ನ್ಯೂಸ್) : ಇತ್ತೀಚೆಗೆ ಮತೀಯ ದ್ವೇಷದಲ್ಲಿ ಕೊಲೆಗೀಡಾದ ಅಬ್ದುಲ್ ಬಶೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಲು ಪ್ರಯತ್ನಿಸಿದ ಶೇಖರ್ ಕುಲಾಲ್ ಅವರಿಗೆ ಕಲಬುರ್ಗಿಯ ವಕೀಲ ಪಿ. ವಿಲಾಸ್ ಕುಮಾರ್ 50,000 ರೂ. ನಗದು ಪುರಸ್ಕಾರ ನೀಡಿದ್ದಾರೆ. ಕಾಟಿಪಳ್ಳದ ದೀಪಕ್ ರಾವ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಅಬ್ದುಲ್ ಮಜೀದ್ ಅವರಿಗೂ 50,000 ರೂ. ನೀಡುವ ಮೂಲಕ ಮಾನವೀಯತೆಗೆ ಗೌರವ ಸಲ್ಲಿಸಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಇಬ್ಬರಿಗೂ ಚೆಕ್ ಹಸ್ತಾಂತರಿಸಿದರು.
ದೀಪಕ್ ರಾವ್ ಕೊಲೆಯಾದ ಸಂದರ್ಭದಲ್ಲಿ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ್ದ ಮಜೀದ್, ಪ್ರಾಣ ಉಳಿಸಲು ಯತ್ನಿಸಿದ್ದರು. ಹಲ್ಲೆಗೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಶೀರ್ ಅವರನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದ ಶೇಖರ್ ಜೀವ ಕಾಪಾಡಲು ಪ್ರಯತ್ನ ಮಾಡಿದ್ದರು.