ಬೆಳ್ತಂಗಡಿ (ಜ.೨೦, ಕುಲಾಲ್ ವರ್ಲ್ಡ್ ನ್ಯೂಸ್): ಮಡಂತ್ಯಾರು ಸಮೀಪ ಲಾರಿ ಹಾಗೂ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ತಾಯಿ – ಮಗು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತರನ್ನು ಮಂಗಳೂರಿನ ಬಜಾಲು ಸಮೀಪದ ಜಲ್ಲಿಗುಡ್ಡೆ ಜಯನಗರ ನಿವಾಸಿಗಳಾದ ಅರ್ಚನಾ (30) ಹಾಗೂ ಆಕೆಯ ಆರು ತಿಂಗಳ ಮಗು ಆಶಿ ಎಂದು ಗುರುತಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಅರ್ಚನಾರ ಪತಿ ಜಗದೀಶ್ ಹಾಗೂ ಸಹ ಪ್ರಯಾಣಿಕರಾದ ವೈಷ್ಣವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಬಜಾಲ್ ನಿವಾಸಿಯಾಗಿದ್ದರೂ ಕಾವೂರು ಸಮೀಪ ಫ್ಲಾಟ್ ನಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಜಗದೀಶ್ ಅವರ ಕುಟುಂಬ ಮಗುವಿನ ನಾಮಕರಣ ಶಾಸ್ತ್ರಕ್ಕಾಗಿ ಬೆಳ್ತಂಗಡಿ ಸಮೀಪ ಇರುವ ಸಂಬಂಧಿಕರ ಮನೆಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಹಾಗೂ ಸಹೋದರಿ ಪುತ್ರಿ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದರು. ಮಡಂತ್ಯಾರು ಆಶೀರ್ವಾದ್ ಸಭಾಂಗಣದ ಮುಂಭಾಗ ತೆರಳುತ್ತಿದ್ದಂತೆ ಇವರ ಕಾರಿಗೆ ಲಾರಿಯೊಂದು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರೆಲ್ಲರೂ ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಇವರನ್ನು ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮಧ್ಯೆ ಅರ್ಚನಾ ಹಾಗೂ ಮಗು ಮೃತಪಟ್ಟಿದ್ದು, ಉಳಿದವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.