ಪುತ್ತೂರು(ಜ.೧೧, ಕುಲಾಲ್ ವರ್ಲ್ಡ್ ನ್ಯೂಸ್): ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿರುವ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ನಾಗರಾಜ್ ಕುಲಾಲ್ ಅವರಿಗೆ `ಬಿರುವೆರ್ ಕುಡ್ಲ’ ಇದರ ಪುತ್ತೂರು ಘಟಕದ ವತಿಯಿಂದ ಇತ್ತೀಚೆಗೆ ಆರ್ಥಿಕ ನೆರವು ನೀಡಲಾಯಿತು.
ಇಳಂತಿಲ ಮುತ್ತಪ್ಪ ಕುಂಬಾರ ಅವರ ಪುತ್ರನಾಗಿರುವ ನಾಗರಾಜ್ ನ್ಯುಮೋನಿಯಾಮತ್ತಿತರ ಕಾಯಿಲೆಯಿಂದ ಬಳಲುತ್ತಿದ್ದು, ಇವರ ತಂದೆಗೂ ಅಸೌಖ್ಯವಿದೆ. ನಾಗರಾಜರ ತಾಯಿ ರುಕ್ಮಿಣಿ ಕೂಲಿ ಕೆಲಸ ಮಾಡಿಕೊಂಡು ಕುಟುಂಬ ಸಲಹುತ್ತಿದ್ದಾರೆ. ನಾಗರಾಜ್ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದು ಆರ್ಥಿಕ ತೊಂದರೆಯಿಂದ ಕಂಗಾಲಾಗಿದ್ದಾರೆ. ಇವರ ಬಗ್ಗೆ ಮಾಹಿತಿ ಪಡೆದ `ಬಿರುವೆರ್ ಕುಡ್ಲ’ ಪುತ್ತೂರು ಘಟಕದ ಸದಸ್ಯರು ಆಸ್ಪತ್ರೆಗೆ ತೆರಳಿ ಧನಸಹಾಯದ ಚೆಕ್ ನೀಡಿದರು. ಈ ವೇಳೆ ಘಟಕದ ಗೌರವ ಸಲಹೆಗಾರ ಹರೀಶ್ ಶಾಂತಿ, ಪ್ರಧಾನ ಕಾರ್ಯದರ್ಶಿ ತೇಜಸ್ ಬಿರ್ವ ಕೇಪುಳು, ಪುರುಷೋತ್ತಮ್ ಅವರು ಉಪಸ್ಥಿತರಿದ್ದರು. ಇದೇ ಸಂದರ್ಭ ನಾಗರಾಜ್ ಅವರಿಗೆ ತುರ್ತು ರಕ್ತದ ಅವಶ್ಯಕತೆಯನ್ನು ಅರಿತ ತೇಜಸ್ ಬಿರ್ವ ರಕ್ತದಾನ ಮಾಡಿ ಮಾನವೀಯತೆ ಮೆರೆದರು.