ವಿಟ್ಲ(ಜ.೦೬, ಕುಲಾಲ್ ವರ್ಲ್ಡ್ ನ್ಯೂಸ್) : ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಫೆ. 18 ರಿಂದ ಫೆ. 25ರವರೆಗೆ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ, ಪ್ರತಿಷ್ಠಾ ವರ್ಧಂತ್ಯುತ್ಸವ, ಭಜನೋತ್ಸವ ಹಾಗೂ ಮಹಿಳಾ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಧರ್ಮಾಧಿಕಾರಿ ಅವರು ಶ್ರೀ ಮೋಹನದಾಸ ಸ್ವಾಮೀಜಿ ಅವರು ಕಳೆದ 17 ವರ್ಷಗಳಲ್ಲಿ ಮಾಣಿಲ ಕ್ಷೇತ್ರದ ಸಾನಿಧ್ಯವನ್ನು ಬೆಳೆಸಿದ್ದಾರೆ. ಶೂನ್ಯದಿಂದ ಸೃಷ್ಟಿಯಾದ ಸ್ಥಳ ಇಂದು ಅವರ ನಿರಂತರ ಪ್ರಯತ್ನದ ಫಲವಾಗಿ ಪವಿತ್ರ ಸಾನಿಧ್ಯವಾಗಿ ಬೆಳೆದಿದೆ ಎಂದರು. ಯಾವುದೇ ಕ್ಷೇತ್ರದ ಸಾನಿಧ್ಯ ಉಳಿಯ ಬೇಕಾದರೆ ಪೂಜೆ, ಹೋಮ, ಉತ್ಸವಗಳು ನಡೆಯುತ್ತಿರಬೇಕು, ಆ ಕಾರಣಕ್ಕಾಗಿ ಮಾಣಿಲ ಕ್ಷೇತ್ರದಲ್ಲಿ ಮತ್ತೊಮ್ಮೆ ನಾಗಮಂಡಲೋತ್ಸವ ನಡೆಯುತ್ತಿದೆ ಎಂದರು.