ಬಂಟ್ವಾಳ(ಸೆ.೦೯, ಕುಲಾಲ್ ವರ್ಲ್ಡ್ ನ್ಯೂಸ್): ಅದು ಗಂಡ ಹೆಂಡತಿ, ಇಬ್ಬರು ಮಕ್ಕಳಿರುವ ಪುಟ್ಟ ಸಂಸಾರ. ಬೀಡಿ ಕಟ್ಟಿ, ಕೂಲಿ ಮಾಡಿ ಜೀವನ ನಡೆಸುವ ಬಡಕುಟುಂಬ. ಅಲ್ಪ ಆದಾಯದಲ್ಲೇ ಜೀವನ ನಡೆಸುತ್ತಿದ್ದ ಕುಟುಂಬ ಈಗ ಕಂಗೆಟ್ಟು ಕುಳಿತಿದೆ. ಮನೆ ನಿಭಾಯಿಸಬೇಕಾದ ಮನೆ ಯಜಮಾನಿ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಈ ಪುಟ್ಟ ಸಂಸಾರ ದಾನಿಗಳ ನೆರವನ್ನು ಎದುರು ನೋಡುತ್ತಿದೆ.
ಬಂಟ್ವಾಳ ತಾಲೂಕಿನ ಸಜೀಪಪಡು ಗ್ರಾಮದ ಮುಂಡೆಗುರಿ ನಿವಾಸಿ ತಿಮ್ಮಪ್ಪ ಮೂಲ್ಯ ಎಂಬವರ ಪತ್ನಿ ಶಾರದಾ ಮೂಲ್ಯ (48) ಹಲವು ಸಮಯಗಳಿಂದ ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದಾರೆ. ದೇರಳಕಟ್ಟೆಯ ಕೆ.ಎಸ್.ಹಗ್ಡೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ವೈದ್ಯರ ಸಲಹೆಯಂತೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾಗಿದೆ. ಅದಕ್ಕಾಗಿ ಪ್ರತಿ ತಿಂಗಳಿಗೆ 14 ಸಾವಿರ ರುಪಾಯಿ ಬೇಕಾಗುತ್ತದೆ.
ಪತ್ನಿಯ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಮಕ್ಕಳ ವಿದ್ಯಭ್ಯಾಸವನ್ನು ಸರಿದೂಗಿಸಲು ಹೆಣಗಾಡುತ್ತಿರುವ ತಿಮ್ಮಪ್ಪ ಮೂಲ್ಯ ಅವರು ದಾನಿಗಳ ಮುಂದೆ ಕೈ ಚಾಚಿದ್ದಾರೆ. ದಾನಿಗಳು ಆರ್ಥೀಕ ನೆರವು ನೀಡುವುದಿದ್ದಲ್ಲಿ ಅವರ ಸಿಂಡಿಕೇಟ್ ಬ್ಯಾಂಕಿನ ಖಾತೆ ಸಂಖ್ಯೆ 02562200050543ಕ್ಕೆ ಅಥವಾ ಅವರ ದೂರವಾಣಿ ಸಂಖ್ಯೆ 7760745435ನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ವರದಿ : ಸಂದೀಪ್ ಸಾಲ್ಯಾನ್