ಬೆಳ್ತಂಗಡಿ(ಏ.೧೭): ಅಸಹಾಯಕರ ಕಷ್ಟಕ್ಕೆ ಸ್ಪಂದಿಸಿ, ಸಹಾಯ ನೀಡುವ ತೃಪ್ತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ, ಬಡವರಿಗೆ-ಅಸಹಾಯಕರಿಗೆ ನೆರವು ನೀಡುವುದು ದೇವರ ಸೇವೆಯೇ ಸರಿ. ಇಂತಹ ಸೇವಾ ಕಾರ್ಯವನ್ನು ಪ್ರತಿ ತಿಂಗಳು ಮಾಡುತ್ತಿರುವ `ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ)‘ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದೆ.
`ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಪ್ರಕಟಿಸಿದ್ದ “ಎರಡೂ ಕಿಡ್ನಿ ವೈಫಲ್ಯ: ರಾಮಣ್ಣ ಮೂಲ್ಯರಿಗೆ ಬೇಕು ಸಹೃದಯರ ನೆರವು” ಎಂಬ ವರದಿಗೆ ಸ್ಪಂದಿಸಿರುವ `ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ)’ ಇದರ ಫೇಸ್ಬುಕ್ ಮತ್ತು ವಾಟ್ಸಪ್ ಗುಂಪಿನ ಸದಸ್ಯರು ಕೈಜೋಡಿಸಿ 15,000 ರೂ. ಸಂಗ್ರಹಿಸಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಇದು ಈ ಗ್ರೂಪಿನ ಒಂಬತ್ತನೇ ಮಾಸಿಕ ಸೇವಾ ಯೋಜನೆಯಾಗಿದೆ.
ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಹೊಂದಿರುವ ಅಳದಂಗಡಿ ಸಮೀಪದ ಸುಲ್ಕೇರಿಮೊಗ್ರು ನಿವಾಸಿ ರಾಮಣ್ಣ ಮೂಲ್ಯ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ವೈದ್ಯಕೀಯ ಚಿಕಿತ್ಸೆಗೆ ಹಣವಿಲ್ಲದೆ ಸಾಕಷ್ಟು ನೋವು ಅನುಭವಿಸುತ್ತಿರುವ ಕುರಿತು ಸುದ್ದಿಯನ್ನು ತಿಳಿದ ತಮ್ಮ ಗ್ರೂಪಿನ ಸದಸ್ಯರ ಬಳಿ ಸಹಾಯ ಮಾಡುವಂತೆ ವಿನಂತಿಸಿದ್ದು, ಇದಕ್ಕೆ ಹಲವು ಮಂದಿ ದಾನಿಗಳು ಹಣ ನೀಡಿ ಸ್ಪಂದಿಸಿದ್ದರು.
ಹೀಗೆ ಒಟ್ಟಾದ 15,000 ರೂ. ಚೆಕ್ಕನ್ನು ಏಪ್ರಿಲ್ ೧೬ರಂದು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲರ ಮುಖಾಂತರ ರಾಮಣ್ಣ ಮೂಲ್ಯರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ತುಳುನಾಡು ಪೊರ್ಲು ಸೇವಾ ಟ್ರಸ್ಟ್ ಇದರ ನಿರ್ವಾಹಕರುಗಳು ಮತ್ತು ಸದಸ್ಯರುಗಳು, `ಕುಲಾಲ್ ವರ್ಲ್ಡ್’ ವಾಟ್ಸಾಪ್ ಗ್ರೂಪಿನ ನಿರ್ವಾಹಕರುಗಳು ಉಪಸ್ಥಿತರಿದ್ದರು.
ಚಾಲಕ ವೃತ್ತಿಯನ್ನು ಮಾಡಿಕೊಂಡು ತಮ್ಮ ಪುಟ್ಟ ಕುಟುಂಬಕ್ಕೆ ಆಧಾರವಾಗಿದ್ದ ರಾಮಣ್ಣ ಅವರು ಎರಡು ವರ್ಷಗಳ ಹಿಂದೆ ಅಸೌಖ್ಯಕ್ಕೀಡಾಗಿದ್ದು, ಸದ್ಯ ಕೆಲಸ ಮಾಡಲಾಗದ ಸ್ಥಿತಿಗೆ ತಲುಪಿದ್ದಾರೆ. ಪತ್ನಿ ಕುಸುಮಾ ಬೀಡಿ ಕಟ್ಟಿ ಅಲ್ಪ ಸ್ವಲ್ಪ ಸಂಪಾದಿಸಿದ್ದೇ ಇದೀಗ ಜೀವನೋಪಾಯಕ್ಕೆ ದಾರಿಯಾಗಿದೆ. ಪ್ರಸ್ತುತ ರಾಮಣ್ಣ ಅವರ ಕಿಡ್ನಿ ಡಯಾಲಿಸಿಸ್ ಗೆ ತಿಂಗಳಿಗೆ ಮೂವತ್ತು ಸಾವಿರದವರೆಗೆ ಹಣ ಖರ್ಚಾಗುತ್ತಿದ್ದು, ಅವರ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ. ಹೀಗಾಗಿ ಸಹೃದಯಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ನೆರವು ನೀಡಲು ಇಚ್ಛಿಸುವ ದಾನಿಗಳು ರಾಮಣ್ಣ ಮೂಲ್ಯ ಅವರ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಹಾಯ ನೀಡಬಹುದು.
B. Ramanna Moolya,
Karnataka Bank, Aladanagady Branch,
S.B A/c No :0152500101090201
IFSC code : KARB0000015
Mobile No: 9845477480, 9663264170
kulalworld.com