ಕೋಸ್ಟಲ್ವುಡ್ ನ ‘ಕಣ್ಣರಂಗ್’ ಬೆಡಗಿ; ʼಕಟ್ಟೆಮಾರ್ʼನಲ್ಲಿ ಹರ್ಷಿತಾ ಮಿಂಚು
ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಇತ್ತೀಚೆಗೆ ʼಕಟ್ಟೆಮಾರ್ʼ ಚಿತ್ರದ ʼಕಣ್ಣ ರಂಗ್ʼ ಎಂಬ ಹಾಡು ರಿಲೀಸ್ ಆಗಿತ್ತು. ಈ ಬ್ಯೂಟಿಫುಲ್ ಮೆಲೊಡಿ ಹಾಡಿನಲ್ಲಿ ಗಮನ ಸೆಳೆದಿದ್ದು ರುಕ್ಕು ಎಂಬ ಪಾತ್ರದ ನಟಿ. ತನ್ನ ಕಣ್ಣೋಟದಿಂದಲೇ ಮಿಂಚು ಹರಿಸಿದ ಈ ಸುಂದರಿ ʼಕಟ್ಟೆಮಾರ್ʼ ಮೂಲಕ ತುಳು ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ.
ಹೌದು, ಈಕೆ ಹರ್ಷಿತಾ ಕುಲಾಲ್. ʼಕಟ್ಟೆಮಾರ್ʼ ಚಿತ್ರದ ಮೂಲಕ ಕೋಸ್ಟಲ್ವುಡ್ ನಲ್ಲಿ ಮೊದಲ ಹೆಜ್ಜೆಯಿಡುತ್ತಿರುವ ಹರ್ಷಿತಾ ಸದ್ಯ ಕುಡ್ಲದಲ್ಲಿ ಹೆಸರು ಮಾಡುತ್ತಿದ್ದಾರೆ. ಚಿತ್ರದ ಪ್ರಮೋಶನ್ ವೇದಿಕೆಗಳಲ್ಲಿ ತನ್ನ ಕ್ಯೂಟ್ ಮಾತುಗಳಿಂದ ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಈ ಕನಸು ಕಣ್ಣಿನ ಹುಡುಗಿ, ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ಅಭಿಲಾಷೆ ಹೊಂದಿದ್ದಾರೆ.
ಮೊದಲ ಚಿತ್ರದ ಬಗ್ಗೆ ಮಾತಿಗಿಳಿದ ಹರ್ಷಿತಾ ಹಲವು ವಿಚಾರಗಳನ್ನು ಹಂಚಿಕೊಂಡರು. “ನಾನು ಕಾಲೇಜು ದಿನಗಳಲ್ಲಿ ಕವರ್ ಸಾಂಗ್ ಒಂದು ಮಾಡಿದ್ದೆ. ಅದರ ಬಳಿಕ ಒಂದಿಷ್ಟು ಫೋಟೋಶೂಟ್ ಗಳನ್ನು ಮಾಡಿಸಿದ್ದೆ. ಆ ಬಳಿಕ ಗೆಳೆಯರೊಬ್ಬರ ನೆರವಿನಿಂದ ನನಗೆ ಈ ಅವಕಾಶ ಬಂತು” ಎಂದು ತನ್ನ ಸಿನಿ ಜರ್ನಿ ಆರಂಭದ ಕಥೆ ಹೇಳುತ್ತಾರೆ.
ಆರಂಭದಲ್ಲಿ ಸಿನಿಮಾ-ನಟನೆ ಬಗ್ಗೆ ಯಾವುದೇ ಆಸಕ್ತಿ ಇರಲಿಲ್ಲ. ಆದರೆ ಫೋಟೋಶೂಟ್ ಮಾಡಿಸಿದ ಬಳಿಕ ಇಂಟರೆಸ್ಟ್ ಬೆಳೆಯಿತು. ಕಾಲೇಜು ಹೋಗುತ್ತಿರುವಾಗ ಮಂಗಳೂರಿಗೆ ಆಕ್ಟಿಂಗ್ ಕ್ಲಾಸ್ ಗೆ ಹೋಗಿದ್ದೆ. ಇದು ಕೂಡಾ ಸಹಾಯ ಮಾಡಿತು ಎನ್ನುತ್ತಾರೆ ಅವರು.
ಚಿತ್ರದ ಬಗ್ಗೆ ಮಾತನಾಡುವ ಅವರು, ಪಾತ್ರ ನನಗೆ ಇಷ್ಟವಾಯಿತು. ಹಳ್ಳಿ ಹುಡುಗಿಯಾಗಿ ಜನರಿಗೆ ಆಪ್ತವಾಗುವ ಪಾತ್ರವದು. ಆ ಕ್ಯಾರಕ್ಟರ್ ನನಗೆ ಹೆಚ್ಚು ಒಪ್ಪುತ್ತಿತ್ತು. ಹೀಗಾಗಿ ನಿರ್ದೇಶಕರು ನನಗೆ ಕಥೆ ಹೇಳಿದಾಗ ಒಪ್ಪಿಕೊಂಡೆ. ಕ್ಯಾಮರಾ ಎದುರಿಸುವ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ. ಆದರೆ ಸೆಟ್ ನಲ್ಲಿ ಎಲ್ಲರೂ ಹೇಳಿಕೊಟ್ಟರು. ಶೂಟಿಂಗ್ ಸಮಯದಲ್ಲಿ ತುಂಬಾ ಕಲಿತೆ ಎನ್ನುತ್ತಾರೆ.
“ಮೊದಲ ದಿನದ ಶೂಟಿಂಗ್ ನಲ್ಲಿ ತುಂಬಾ ಭಯವಾಗಿತ್ತು. ಹೆಚ್ಚು ಜನರ ಪರಿಚಯ ಇರಲಿಲ್ಲ, ಆದರೆ ಈ ತಂಡ ತುಂಬಾ ಒಳ್ಳೆಯದಿತ್ತು. ಮೊದಲ ಬಾರಿಯ ನಟಿಯರಿಗೆ ಇಂತಹ ತಂಡವೇ ಸಿಗಬೇಕು” ಎಂದು ಚಿತ್ರತಂಡದ ಬಗ್ಗೆ ಮಾತನಾಡುವ ಹರ್ಷಿತಾ, “ನಟ ಸ್ವರಾಜ್ ಅವರು ತುಂಬಾ ಸಪೋರ್ಟ್ ಮಾಡಿದ್ದರು” ಎಂದು ಹೇಳಲು ಮರೆಯುವುದಿಲ್ಲ.
ಜ.23ರಂದು ತೆರೆ ಕಂಡ ಕಟ್ಟೆಮಾರ್ ಚಿತ್ರಕ್ಕೆ ಸಚಿನ್ ಕಟ್ಲ ಮತ್ತು ರಕ್ಷಿತ್ ಗಾಣಿಗ ನಿರ್ದೇಶನ ಮಾಡಿದ್ದಾರೆ. ಅಸ್ತ್ರ ಪ್ರೊಡಕ್ಷನ್ ಬ್ಯಾನರ್ನಲ್ಲಿ ಲಂಚುಲಾಲ್ ಕೆ.ಎಸ್ ಬಂಡವಾಳ ಹೂಡಿರುವ ಚಿತ್ರದಲ್ಲಿ ಸ್ವರಾಜ್ ಶೆಟ್ಟಿ, ಜೆಪಿ ತೂಮಿನಾಡು, ಲಂಚುಲಾಲ್, ಆಕಾಂಕ್ಷಾ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ನಾನು ಸಿನಿಮಾದಲ್ಲಿ ನಟನೆ ಮಾಡುವ ಬಗ್ಗೆ ಮನೆಯವರು ಆರಂಭದಲ್ಲಿ ಹೆಚ್ಚೇನು ಇಷ್ಟ ಪಟ್ಟಿರಲಿಲ್ಲ. ಆದರೆ ಈಗ ಖುಷಿಯಾಗಿದ್ದಾರೆ. ಚಿತ್ರದ ಬಗ್ಗೆ, ನನ್ನ ಬಗ್ಗೆ ಜನರು ಮಾತನಾಡುವಾಗ ಮನೆಯವರೂ ಖುಷಿ ಪಡುತ್ತಿದ್ದಾರೆ ಎನ್ನುವ ಹರ್ಷಿತಾ, ಮುಂದೆ ಉತ್ತಮ ಕಥೆ ಸಿಕ್ಕಿದರೆ ಖಂಡಿತಾ ನಟನೆ ಮಾಡುತ್ತೇನೆ. ಉತ್ತಮ ಪಾತ್ರಗಳನ್ನು ಮಾಡುವ ಆಸೆಯಿದೆ ಎನ್ನುತ್ತಾರೆ.
ʼಕಟ್ಟೆಮಾರ್ʼ ಚಿತ್ರದ ಟ್ರೇಲರ್ ಈಗಾಗಲೇ ಸೂಪರ್ ಹಿಟ್ ಆಗಿದೆ. ಅಲ್ಲದೆ ಸಿದ್ದಾರ್ಥ ಬೆಳ್ಮಣ್ ಹಾಡಿರುವ ʼಕಣ್ಣ ರಂಗ್ʼ ಹಾಡು ಕೂಡಾ ಸದ್ದು ಮಾಡುತ್ತಿದೆ. ದೈವ ನಂಬಿಕೆಯ ಬಗ್ಗೆ ʼಕಟ್ಟೆಮಾರ್ʼ ಚಿತ್ರದಲ್ಲಿ ಸಚಿನ್ ಮತ್ತು ರಕ್ಷಿತ್ ಹೇಳುವ ಪ್ರಯತ್ನ ಮಾಡಿದ್ದಾರೆ. ಉದ್ಯಮಿ ಲಂಚುಲಾಲ್ ಅವರು ಬಂಡವಾಳ ಹೂಡಿದ್ದಾರೆ.
ಕೀರ್ತನ್ ಶೆಟ್ಟಿ ಬೋಳ









