ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಯುವ ವಕೀಲರೊಬ್ಬರು ಅಂಗಾಂಗದಾನದ ಮೂಲಕ ಸಾವಿನಲ್ಲೂ ಸಾರ್ಥಕ್ಯ ಮೆರೆದಿದ್ದಾರೆ. ಬಿ.ಸಿ.ರೋಡು ಕೈಕುಂಜೆ ನಿವಾಸಿ ಪ್ರಥಮ್ ಬಂಗೇರ(27) ಸದಾ ಚಟುವಟಿಕೆಯುಳ್ಳ, ಲವಲವಿಕೆಯಿಂದಿದ್ದ ಯುವಕ. ನೃತ್ಯದಲ್ಲಿ ಸದಾ ಮುಂದು. ಕಷ್ಟದಲ್ಲಿದ್ದವರಿಗೆ ಉಪಕಾರ ಮಾಡುವುದರಲ್ಲೂ ಮೊದಲಿಗ. ಎಲ್.ಎಲ್.ಬಿ.ಯಲ್ಲಿಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಪ್ರಥಮ್, ಬಂಟ್ವಾಳದ ಹಿರಿಯ ವಕೀಲರೊಬ್ಬರ ಬಳಿ ಪ್ರಾಕ್ಟಿಸ್ ಮಾಡುತ್ತಿದ್ದ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಅಪಘಾತ ಆತನ ಪ್ರಾಣವನ್ನೇ ಕಸಿದಿತ್ತು.

ಕಳೆದ ವಾರ ಬಿ.ಸಿ.ರೋಡ್ ಮುಖ್ಯವೃತ್ತದ ಬಳಿ ಪ್ರಥಮ್ ಬೈಕ್ನಲ್ಲಿ ತೆರಳುತ್ತಿದ್ದಾಗ ಡಿವೈಡರ್ಗೆ ಡಿಕ್ಕಿಯಾಗಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಒಂದು ವಾರ ಕೋಮಾದಲ್ಲಿದ್ದು ಸಾವು, ಬದುಕಿನ ನಡುವೆ ಹೋರಾಡಿದ ಪ್ರಥಮ್ ಬಂಗೇರರ ಮೆದುಳು ರವಿವಾರ ರಾತ್ರಿ ನಿಷ್ಕ್ರಿಯಗೊಂಡಿದೆ. ವೈದ್ಯರು ಆತ ಇನ್ನು ಬದುಕುವುದಿಲ್ಲ ಎಂದು ಘೋಷಿಸಿದ್ದಾರೆ. ಪ್ರಥಮ್ ತಂದೆ ವಾಮನ ಸಾಲ್ಯಾನ್ ಮತ್ತು ಸಹೋದರ ಪ್ರೀತಂ ಆತನ ಎರಡು ಕಣ್ಣು, ಎರಡು ಕಿಡ್ನಿ, ಲಿವರ್, ಕರುಳಿನ ಭಾಗವನ್ನು ಇನ್ಯಾರದ್ದೋ ಬದುಕಿಗೆ ಬೆಳಕಾಗುವಂತೆ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ. ಈ ಮೂಲಕ ಪ್ರಥಮ್ ಬಂಗೇರ ಸಾವಿನ ಬಳಿಕವೂ ಅಮರನಾಗಿದ್ದಾರೆ.
ಕಳೆದ ನವೆಂಬರ್ನಲ್ಲಿ ಪ್ರಥಮ್ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ತಂದೆ ಮತ್ತು ಸಹೋದರನೊಂದಿಗೆ ವಾಸವಾಗಿದ್ದ ಪ್ರಥಮ್ ಸಾವಿನಲ್ಲೂ ಸಾರ್ಥಕ್ಯ ಮೆರೆದಿದ್ದಾರೆ.
