ಬೆಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಬೆಂಗಳೂರು ಮಲ್ಲೇಶ್ವರಂ ವಿದ್ಯಾಮಂದಿರ ಪದವಿಪೂರ್ವಕಾಲೇಜಿನ ವಿದ್ಯಾರ್ಥಿನಿ ಪ್ರತ್ಯುಶಾ ಎಂ. ಪಿ ಅವರು ರಾಜ್ಯಕ್ಕೆ 6ನೇ ಸ್ಥಾನ ಪಡೆದುಕೊಂಡಿದ್ದಾರೆ.
ಇವರು ಸಂಸ್ಕೃತ, ಗಣಿತ ಹಾಗೂ ಜೀವಶಾಸ್ತ್ರ ಈ ಮೂರು ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದರೆ, ರಸಾಯನಶಾಸ್ತ್ರದಲ್ಲಿ 99 , ಇಂಗ್ಲಿಷ್ ಹಾಗೂ ಭೌತಶಾಸ್ತ್ರದಲ್ಲಿ 97 ಅಂಕಗಳನ್ನು ಪಡೆದು ಒಟ್ಟಾರೆಯಾಗಿ 600 ಅಂಕಗಳಲ್ಲಿ 593( ಶೇ. 98.83% ) ಅಂಕಗಳನ್ನು ಗಳಿಸಿ ರಾಜ್ಯಕ್ಕೇ 6ನೇ ಸ್ಥಾನ ಪಡೆದಿದ್ದಾರೆ.
ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಲೋಕವಳ್ಳಿಯವರಾಗಿದ್ದು, ಪ್ರಸ್ತುತ ಬೆಂಗಳೂರು ಸದಾಶಿವನಗರದಲ್ಲಿ ನೆಲೆಸಿರುವ ಪುಟ್ಟಸ್ವಾಮಿ ಮತ್ತು ಪುಷ್ಪಾ ದಂಪತಿಯ ಸುಪುತ್ರಿ. ಪ್ರತ್ಯುಶಾ ಅವರು ಸದಾಶಿವನಗರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸೆಸೆಲ್ಸಿ ಪೂರೈಸಿದ್ದು, ರಾಜ್ಯಕ್ಕೆ ಎರಡನೇ ರಾಂಕ್ ಪಡೆದಿದ್ದರು. ಇಂಜಿನಿಯರಿಂಗ್ ಅಥವಾ ಮೆಡಿಕಲ್ ಓದಿ ಉತ್ತಮ ಜೀವನ ನಡೆಸುವ ಕನಸುಕಟ್ಟಿಕೊಂಡಿರುವ ಪ್ರತ್ಯುಶಾ “ನನ್ನ ವಿದ್ಯಾಭ್ಯಾಸಕ್ಕೆ ಪೋಷಕರು, ಸಹೋದರಿ, ಸ್ನೇಹಿತರು ಹಾಗೂ ಶಾಲೆ ಸಂಪೂರ್ಣ ಸಹಕಾರ ನೀಡುತ್ತಿದೆ. ಇವರೆಲ್ಲರ ಸಹಾಯ ಸಹಕಾರದ ಫಲವಾಗಿ ರಾಜ್ಯಕ್ಕೆ 6ನೇ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.