ಬೆಂಗಳೂರು(ಕುಲಾಲವರ್ಲ್ಡ್ ಡಾಟ್ ಕಾಮ್): ಮನಸ್ಸಿದ್ದರೆ ಮಾರ್ಗ..ಈ ಮಾತು ಇವರ ವಿಚಾರದಲ್ಲಿ ನೂರಕ್ಕೆ ನೂರು ಸತ್ಯ. ದೇಶ ಸುತ್ತಿ ನೋಡು ಕೋಶ ಓದಿ ನೋಡಿ ಎಂಬಂತೆ ಈ ವೈದ್ಯ ಕೂಡ ತಮ್ಮ ಕಠಿಣ ಶ್ರಮದಿಂದ ಇಂದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ದೇಶದಲ್ಲಿ ಕರ್ನಾಟಕದ ಹೆಸರನ್ನು ಪಸರಿಸುವಂತೆ ಮಾಡಿದ್ದಾರೆ. ನೀಟ್ ( NEET) ಪಿಜಿ ಪರೀಕ್ಷೆಯ ಎರಡು ವಿಷಯದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಡಾ.ಚಿದಾನಂದ ಕುಂಬಾರ. ಬೆಳಗಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು 2021-2022ನೇ ಸಾಲಿನ ನೀಟ್ ಪಿಜಿ ಪರೀಕ್ಷೆಯಲ್ಲಿ 759 ಅಂಕಗಳಿಸಿದ್ದಾರೆ. ಡಾ. ಚಿದಾನದ ಕುಂಬಾರ ಬೆಳಗಲಿ ಹುಬ್ಬಳ್ಳಿ ಕಿಮ್ಸ್ನಲ್ಲಿ ಎಮ್ಬಿಬಿಎಸ್ (MBBS) ಮುಗಿಸಿದ್ದರು. ಒಂದು ವರ್ಷದ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯ ಏಮ್ಸ್ನಲ್ಲಿ ಎಂಡಿ ಮುಗಸಿದ್ದಾರೆ. ಸೂಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆಯಲ್ಲಿ ಚಿದಾನಂತ ಬೆಳಗಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈ ವಿಚಾರ ತಿಳಿದ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಡೈಜೆಸ್ಟಿವ್ ಸಿಸ್ಟಮ್ ಸ್ಪೆಷಲಿಸ್ಟ್ (Digestive System Specialist) ವಿಷಯದಲ್ಲಿ 400ಕ್ಕೆ 340 ಅಂಕ ಪಡೆದಿದ್ದು, ಡಿಎಮ್ ಹೆಪೊಟಾಲಜಿ (ಲಿವರ್ ಸ್ಪೆಷಲಿಸ್ಟ್) 400 ಕ್ಕೆ 330 ಅಂಕ ಪಡೆದಿದ್ದಾರೆ. ಈ ಸಾಧನೆಯನ್ನು ನಮ್ಮ ಬಾಗಲಕೋಟೆಯ ವೈದ್ಯ ಮಾಡಿರುವುದು ಇಡೀ ಕರುನಾಡಿಗೆ ಸಂತಸ ಮೂಡಿಸಿದೆ.
ಜನವರಿ 10 ರಂದು ನಡೆದಿದ್ದ ನೀಟ್ ಪರೀಕ್ಷೆ!
ಜನವರಿ 10, 2022ರಲ್ಲಿ ಸೂಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯ ಫಲಿತಾಂಶ ಜನವರಿ 31 ರಂದು ರಾತ್ರಿ ಬಂದಿದೆ. ಸದ್ಯ ಹೈದರಾಬಾದ್ ಗ್ಲೋಬಲ್ ಆಸ್ಪತ್ರೆಯಲ್ಲಿ ವೈದ್ಯ ಡಾ. ಚಿದಾನಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ವಿಚಾರ ತಿಳಿದ ಮುಧೋಳ ಶಾಸಕ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರ ಅವರು, ಡಾ.ಚಿದಾನಂದ ಕುಂಬಾರ ಬೆಳಗಲಿ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಗ್ರಾಮದ ಮನೆಗೆ ಬಂದ ಗ್ರಾಮಸ್ಥರು ಡಾ. ಚಿದಾನಂದ ಕುಂಬಾರ ಅವರ ಮನೆಗೆ ಬಂದು ಶುಭಾಶಯ ತಿಳಿಸಿದ್ದಾರೆ.
ರೈತನ ಮಗ ಡಾ.ಚಿದಾನಂದ ಕುಂಬಾರ!
“ನಮ್ಮ ತಂದೆ ಒಬ್ಬ ರೈತ ನಾನೊಬ್ಬ ರೈತನ ಮಗ ಅಂತ ಹೇಳಿಕೊಳ್ಳಲು ತುಂಬಾ ಹೆಮ್ಮೆಯಿದೆ. ನನ್ನ ತಂದೆ ಸಹಕಾರ, ಕುಟುಂಬಸ್ಥರ ಪ್ರೋತ್ಸಾಹದಿಂದ ನಾನು ವೈದ್ಯಕೀಯ ಕ್ಷೇತ್ರಕ್ಕೆ ಬಂದು ಇಂತಹ ಸಾಧನೆ ಮಾಡುವುದಕ್ಕೆ ಸಾಧ್ಯವಾಯಿತು. ಇನ್ನು ನಮ್ಮ ಕ್ಷೇತ್ರದ ಶಾಸಕರು, ಸದ್ಯ ಸಚಿವರು ಆದ ಗೋವಿಂದ ಕಾರಜೋಳ ಅವರು ಕೂಡ ಎಂಬಿಬಿಎಸ್ ಓದುವಾಗ ಪ್ರೋತ್ಸಾಹ ನೀಡಿದ್ದು, ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಡಾ. ಚಿದಾನಂದ ಕುಂಬಾರ ಹೇಳಿದ್ದಾರೆ. ಕಲ್ಲಪ್ಪ ಕುಂಬಾರ ಮತ್ತು ಕಸ್ತೂರಿ ಕುಂಬಾರ ದಂಪತಿಗಳ ಎರಡನೇ ಮಗನಾದ ಚಿದಾನಂದ ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದು, ತಂದೆಯ ಆಶ್ರಯದಲ್ಲೇ ಬೆಳೆದು ದೊಡ್ಡ ಸಾಧನೆ ಮಾಡಿದ್ದಾರೆ.