ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮುಂಡ್ಕೂರು ಕೋಡಿಮಾರ್ ನಿವಾಸಿ ಸುನೀತಾ ಮೂಲ್ಯರಿಗೆ ಕುಲಾಲ ಚಾವಡಿ ವಾಟ್ಸಾಪ್ ಗ್ರೂಪ್ ವತಿಯಿಂದ 25 ಸಾವಿರ ರೂ. ಧನ ಸಹಾಯ ನೀಡಲಾಯಿತು.
ಕೈ ಹಿಡಿದ ಪತಿಯಿಂದ ಪರಿತ್ಯಕ್ತರಾಗಿ ತವರು ಮನೆ ಸೇರಿದ್ದ ಸುನೀತಾರ ಬದುಕಿಗೆ ಕಾಡಿದ ಹೃದ್ರೋಗದ ಖಾಯಿಲೆಯು ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ದೈಹಿಕ ಮಾನಸಿಕ ನೋವನ್ನು ಅವುಡುಗಚ್ಚಿ ಸಹಿಸಿಕೊಂಡರೂ ದೇಹಕ್ಕಂಟಿದ ಖಾಯಿಲೆಯ ಚಿಕಿತ್ಸೆಗೆ ತಗಲುವ ವೆಚ್ಚಕ್ಕೇನು ಎಂಬುವುದು ಅವರ ನಿತ್ಯ ಕಾಡುವ ಚಿಂತೆಯಾಗಿತ್ತು. ಅನಾಥೋ ದೈವ ರಕ್ಷಕ ಅನ್ನುವಂತೆ ಆ ಕ್ಷಣಕ್ಕೆ ಅವರಿಗೆ ಕುಲಾಲ ಚಾವಡಿಯ ಸಹೃದಯಿಗಳು ಧನ ಸಹಾಯ ನೀಡಿ ಮಾನವೀಯತೆ ಮೆರೆದರು.
ಹಳಿ ತಪ್ಪಿದ ಬದುಕಿನ ಲಗಾಮು ಒಮ್ಮೆ ಕೈಗೆ ಸಿಕ್ಕರೆ ಮತ್ತೆ ವಿಧಿಯನ್ನಾದರೂ ಜೈಸಿ ಬಿಟ್ಟೇನು ಎನ್ನುವ ಅವರ ದೃಢ ವಿಶ್ವಾಸದ ಹೆಜ್ಜೆಗೆ ಆತ್ಮಬಲ ತುಂಬುವ ಪುಟ್ಟ ಪ್ರಯತ್ನ ಚಾವಡಿ ಬಂಧುಗಳದ್ದು. ಸುನೀತಾರವರ ವಾಸ್ತವ ಬದುಕಿನ ಕಥೆ ವ್ಯಥೆಗಳನ್ನು ಅಕ್ಷರರೂಪಕ್ಕಿಳಿಸಿದಾಗ ಮಿಡಿದ ಮಾನವೀಯ ಹೃದಯಗಳು ಅಗಣಿತ. ಶ್ರೀರಾಮನ ರಾಮಸೇತುವಿಗೆ ಅಳಿಲು ಸಲ್ಲಿಸಿದ ಸೇವೆಯಂತೆ ಶಕ್ತ್ಯಾನುಸಾರ ನನ್ನದೊಂದಿಷ್ಟು ಪಾಲಿರಲಿ ಎನ್ನುವ ಸಹೃದಯಿಗಳ ಸಹಕಾರದ ಪೈಪೋಟಿ ನಮ್ಮ ಚಾವಡಿಯ ಧ್ಯೇಯಕ್ಕೆ ನೂರಾನೆಯ ಬಲ ತುಂಬಿದಂತೆ. ಸಹೃದಯಿ ಚಾವಡಿ ಬಂಧುಗಳ ಸದಾಶಯದ ಹಾರೈಕೆಯು ಆರ್ಥಿಕ ನೆರವಾಗಿ 25000 ರೂ. ಒಗ್ಗೂಡಿತ್ತು.
ಆರ್ಥಿಕ ನೆರವು ಹಸ್ತಾಂತರಕ್ಕೆ ಜೊತೆಗೂಡಿದ ಚಾವಡಿ ಬಂಧುಗಳು ದೇವಪ್ಪ ಕುಲಾಲ್, ವಿಶ್ವನಾಥ ಕುಲಾಲ್, ಹೃದಯ್ ಕುಲಾಲ್, ಸುಧೀರ್ ಬಂಗೇರ, ಸಂದೇಶ್ ಕುಲಾಲ್, ಜ್ಯೋತಿ ಕುಲಾಲ್ ,ಶಾಲಿನಿ ಕುಲಾಲ್, ಸಂತೋಷ್ ನಾನಿಲ್ತಾರ್ ಹಾಗೂ ಯೋಗೀಶ್ ಕುಲಾಲ್ ಮುಲ್ಲಡ್ಕ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಸಹೃದಯಿ ದಾನಿಗಳಿಗೆ ಕುಲಾಲ ಚಾವಡಿಯ ಅಡ್ಮಿನ್ ಸಂತೋಷ್ ಕುಲಾಲ್ ಪದವು ಕೃತಜ್ಞತೆ ಸಲ್ಲಿಸಿದರು.
ಹೃದ್ರೋಗಿ ಸುನೀತಾ ಮೂಲ್ಯರಿಗೆ ಕುಲಾಲ ಚಾವಡಿಯಿಂದ 25 ಸಾವಿರ ರೂ. ಧನ ಸಹಾಯ
Kulal news
1 Min Read