ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಲಾಲ ಸಮಾಜದ ಬಡ ರೋಗಿಗಳ ಅಸಹಾಯಕ ಪರಿಸ್ಥಿಯ ನೈಜ ಚಿತ್ರಣವನ್ನು ದಾನಿಗಳ ಮುಂದಿಟ್ಟು ವರದಿ ಪ್ರಕಟಿಸುತ್ತಿರುವ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಎಂಬಂತೆ ಹಲವು ಕುಟುಂಬಕ್ಕೆ ನೆರವಿನ ಬೆಂಬಲ ಹರಿದು ಬರುತ್ತಿದೆ. ಒಂದೆರಡು ಕುಟುಂಬಕ್ಕೆ ನಮ್ಮ ಬಳಗದ ವಾಟ್ಸಪ್ ಮಿತ್ರರೇ ಸಾಧ್ಯವಾದ ನೆರವು ನೀಡಿ ಸಹಕರಿಸಿದ್ದರೆ, ಕೆಲ ಕುಟುಂಬಕ್ಕೆ ದೇಶ-ವಿದೇಶದ ಸಂಘ ಸಂಸ್ಥೆಯ ಮಿತ್ರರು ಹಣಕಾಸಿನ ನೆರವು ನೀಡಿ ಬೆಂಬಲಿಸಿದ್ದಾರೆ.
“ಎರಡೂ ಕಿಡ್ನಿ ವೈಫಲ್ಯದಿಂದ ಕಂಗಾಲಾದ ಯುವಕನಿಗೆ ಸಹಾಯ ಬೇಕಿದೆ” ಎಂಬ ಪಾಣೆಮಂಗಳೂರು ಮೊಗರ್ನಾಡು ಡೊಂಬಯ ಮೂಲ್ಯ ಮತ್ತು ವೇದಾವತಿಯರ ಪುತ್ರ 42 ವರ್ಷ ಪ್ರಾಯದ ಸತೀಶ್ ಅವರ ಕುರಿತ ವರದಿಗೆ ಸ್ಪಂದಿಸಿರುವ ದೋಹಾ ಕತಾರಿನ ಕುಲಾಲ ಮಿತ್ರರು 25 ಸಾವಿರ ರೂ. ಕಳಿಸಿಕೊಟ್ಟಿದ್ದಾರೆ.
ಅಲ್ಲದೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬೋಳ್ಯಾರು ಸಮೀಪದ ಒಡಕಿನ ಕಟ್ಟೆಯ ಸಂಕೇಶ ನಿವಾಸಿ ಜಯಂತಿ ಅವರ ಬಗೆಗಿನ `ಮುರುಕು ಮನೆಯಲ್ಲಿ ದಿಕ್ಕು ತೋಚದೆ ಕಣ್ಣೀರು ಸುರಿಸುತ್ತಿರುವ 4 ಹೆಣ್ಮಕ್ಕಳ ಕುಟುಂಬ’ ಎಂಬ ವರದಿಗೆ ಸ್ಪಂದನೆ ನೀಡಿರುವ ಮುಂಬಯಿಯ ಉದ್ಯಮಿ ಸುನೀಲ್ ಆರ್ ಸಾಲ್ಯಾನ್ ಅವರು 25 ಸಾವಿರ ರೂಪಾಯಿಗಳನ್ನು ನೀಡಿ ಮಾನವೀಯತೆ ಮೆರೆದ್ದಾರೆ.