ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸಾಮಾಜಿಕ ಮತ್ತು ಕೌಟುಂಬಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಲವಲವಿಕೆಯಿಂದ ಇದ್ದ ಯುವಕ ಮೂರು ವರ್ಷಗಳ ಹಿಂದೆ ಎರಡೂ ಕಿಡ್ನಿ ವೈಫಲ್ಯಕ್ಕೊಳಗಾಗಿ ಇಡೀ ಕುಟುಂಬ ಆರ್ಥಿಕ ಬೆಂಬಲ ಇಲ್ಲದೇ ಚಿಂತಾಜನಕ ಸ್ಥಿತಿಯಲ್ಲಿ ಕಾಲಕಳೆಯುತ್ತಿದ್ದಾರೆ. ಚಿಕಿತ್ಸೆಗೆ ಹೆಚ್ಚಿನ ಹಣಕಾಸು ಬೇಕಾಗಿದೆ. ಹಾಗಾಗಿ ದಾನಿಗಳ ನೆರವಿಗೆ ಮೊರೆ ಇಟ್ಟಿದ್ದಾರೆ.
ಪಾಣೆಮಂಗಳೂರು ಮೊಗರ್ನಾಡು ಡೊಂಬಯ ಮೂಲ್ಯ ಮತ್ತು ವೇದಾವತಿಯರ ಪುತ್ರ 42 ವರ್ಷ ಪ್ರಾಯದ ಸತೀಶ್ ಕಿಡ್ನಿಗಳ ವೈಫಲ್ಯಗೊಂಡುದರ ಪರಿಣಾಮವಾಗಿ ಕಳೆದ ಮೂರು ವರ್ಷಗಳಿಂದ ವಾರದಲ್ಲಿ ಮೂರು ಸಲ ಡಯಾಲಿಸಿಸ್ ಮಾಡಿ ಕಷ್ಟದಿಂದ ಜೀವಿಸುತ್ತಿದ್ದಾರೆ. ಒಬ್ಬಳು ಸಹೋದರಿ ಮತ್ತು ಇಬ್ಬರು ಸಹೋದರರ ಜೊತೆ ಇವರು ವಾಸ ಮಾಡುತ್ತಿದ್ದಾರೆ. ಸಹೋದರಿ ಬೀಡಿ ಕಟ್ಟುತ್ತಿದ್ದು ಇಬ್ಬರು ಸಹೋದರರು ಕೂಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಅವಿವಾಹಿತರಾಗಿದ್ದು ಯಾರಿಗೂ ಹೇಳಿಕೊಳ್ಳುವಂಥ ಆದಾಯವಿಲ್ಲ. ತೀರಾ ಬಡತನದಿಂದಲೇ ದಿನದೂಡಿದ್ದ ಇವರ ತಂದೆ ತಾಯಿ ವ್ಯಥೆಯಿಂದಲೇ ಕಾಲಕಳೆದು ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಹೊಟೇಲು ಕಾರ್ಮಿಕರಾಗಿ ದುಡಿಯುತ್ತಿದ್ದ ಸತೀಶ್ ಇಡೀ ಕುಟುಂಬದ ಆಸರೆಯಾಗಿದ್ದರು. ಅನಿರೀಕ್ಷಿತವಾಗಿ ಬಂದ ಕಿಡ್ನಿ ಸಮಸ್ಯೆ ಇಡೀ ಕುಟುಂಬವನ್ನು ದಿಕ್ಕು ತೋಚದಂತೆ ಮಾಡಿದೆ. ಸ್ವಂತ ಮನೆ ಕಟ್ಟಲು ಬ್ಯಾಂಕ್ ಲೋನು ಮಾಡಿ ಖರೀದಿಸಿದ ಸ್ಥಳದಲ್ಲಿ ಮನೆ ಕಟ್ಟಲು ಆರಂಭಿಸುವ ಸಮಯದಲ್ಲೇ ಉಂಟಾದ ಅನಾರೋಗ್ಯ ಸಮಸ್ಯೆಯಿಂದ ಮನೆಕಟ್ಟುವ ಕನಸು ನನಸಾಗಲಿಲ್ಲ. ಕಷ್ಟಪಟ್ಟು ಖರೀದಿಸಿದ ಸ್ಥಳವನ್ನು ಔಷಧಿ ಖರ್ಚಿಗಾಗಿ ಮಾರಬೇಕಾದ ಪರಿಸ್ಥಿತಿ ಬಂತು. ಸದ್ಯ ದುಡಿಮೆಯಿಲ್ಲದೆ ದಿನನಿತ್ಯದ ಆಹಾರಕ್ಕೂ ಪರದಾಡುವ ಅವಸ್ಥೆ ಬಂದೊದಗಿದೆ. ಪ್ರಸ್ತುತ ದೇರಳಕಟ್ಟೆ ಆಸ್ಪತ್ರೆಯಲ್ಲಿ ಅವರಿವರಿಂದ ಸಾಲಸೋಲ ಮಾಡಿ ವಾರಕ್ಕೆ ಮೂರು ಸಲ ಡಯಾಲಿಸಿಸ್ ಮಾಡುತ್ತಿದ್ದಾರೆ. ಇವರ ಅನಾರೋಗ್ಯದ ಶಾಶ್ವತ ಪರಿಹಾರಕ್ಕೆ ಲಕ್ಷಾಂತರ ರೂಪಾಯಿ ಅಗತ್ಯ ಇದ್ದು ಪರಿಹಾರ ನೆರವು ನೀಡುವ ದಾನಿಗಳು ಸತೀಶ್ ಅವರ ಹೆಸರಿನಲ್ಲಿರುವ ಕೆನರಾ ಬ್ಯಾಂಕ್ (ಹಳೆ ಸಿಂಡಿಕೇಟ್) ಬ್ಯಾಂಕ್ ಶಂಭೂರು ಶಾಖೆಯ ಈ ಕೆಳಗೆ ನೀಡಿದ ಖಾತೆಗೆ ಪಾವತಿಸಬಹುದು. ನಿಮ್ಮ ಅಲ್ಪ ಕಾಣಿಕೆ ಬಹುದೊಡ್ಡ ನೆರವು ನೀಡಬಲ್ಲದು.
Sathish
Canara Bank
A/C No.: 02942610003616
SHAMBUR BRANCH
IFSC Code: SYNB0000294
Mobile No.: 6363377405