ಪೆರ್ಡೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾಮಳೆಯ ರೌದ್ರತೆಗೆ ಸಿಲುಕಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಲಾಲ ಕುಟುಂಬಗಳಿಗೆ ಸಹಾಯದ ಶ್ರೀರಕ್ಷೆಗಾಗಿ ಪೆರ್ಡೂರು ಕುಲಾಲ ಸಂಘ ಮಾಡಿಕೊಂಡ ಮನವಿಗಾಗಿ ಸ್ಪಂದಿಸಿದ ಸಹೃದಯರಿಂದ ಒಟ್ಟುಗೂಡಿದ 2,13,204 ರೂಪಾಯಿಯನ್ನು ಅ.18, ಆದಿತ್ಯವಾರ ಸಂಜೆ ಪೆರ್ಡೂರು ಕುಲಾಲ ಸಮುದಾಯ ಭವನ ಬುಕ್ಕಿಗುಡ್ಡೆಯಲ್ಲಿ ಸಂತ್ರಸ್ತ ಫಲಾನುಭವಿ ಕುಟುಂಬಗಳಿಗೆ ಆದ್ಯತೆಯ ಮೇರೆಗೆ ಹಂಚಿ ಸಹಾಯಧನ ನೀಡುವ ಕಾರ್ಯಕ್ರಮ ನಡೆಯಿತು.
ಸರಳವಾಗಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಾನಿಗಳಾದ ಉದ್ಯಮಿ ವಿಠಲ ಮೂಲ್ಯ ಪೆರಂಪಳ್ಳಿ, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ(ನಿ) ಪೆರ್ಡೂರು ಇದರ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಾಲ್, ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷರಾದ ಐತು ಕುಲಾಲ್ ಕನ್ಯಾನ, ಗೌರವಾಧ್ಯಕ್ಷರಾದ ರಾಮ ಕುಲಾಲ್ ಪಕ್ಕಾಲ್ ಉಪಸ್ಥಿತರಿದ್ದು ಫಲಾನುಭವಿಗಳಿಗೆ ಚೆಕ್ ವಿತರಿಸಿದರು.ಸಮಾರಂಭದಲ್ಲಿ ಪೆರ್ಡೂರು ಕುಲಾಲ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿ ಸದಸ್ಯರು, ದಾನಿಗಳು ಹಾಜರಿದ್ದರು.