ಬಸವಕಲ್ಯಾಣ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಸಿಆರ್ಪಿಎಫ್ ಯೋಧ ಶಿವಾನಂದ ಕುಂಬಾರ (52) ಅವರ ಅಂತ್ಯಕ್ರಿಯೆ ತಾಲ್ಲೂಕಿನ ಗಿಲಗಿಲಿ ಗ್ರಾಮದಲ್ಲಿ ಗುರುವಾರ ಸಕಲ ಗೌರವಗಳೊಂದಿಗೆ ನಡೆಯಿತು. ಯೋಧ ಶಿವಾನಂದ ಕುಂಬಾರ ಅವರು ಛತ್ತಿಸಗಡ್ದಲ್ಲಿನ ತಮ್ಮ ಕ್ಯಾಂಪ್ನಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.
ಛತ್ತಿಸಗಡದ ಸುಕ್ಮಾ ಎಂಬಲ್ಲಿ ಸಿಆರ್ಪಿಎಫ್ನ ಎಎಸ್ಐ ಹುದ್ದೆಯಲ್ಲಿದ್ದರು. ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ಗಿಲಗಿಲಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು. ತಾಲ್ಲೂಕು ಆಡಳಿತದಿಂದ ತಹಶೀಲ್ದಾರ್ ಸಾವಿತ್ರಿ ಸಲಗರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಸಿಆರ್ಪಿಎಫ್ನ ಯೋಧರು ಹಾಗೂ ಅಧಿಕಾರಿಗಳು ಹಾಜರಿದ್ದು ಗೌರವ ಸಲ್ಲಿಸಿದರು.
ಶಿವಾನಂದ ಅವರು ಎ.ಕೆ. 47 ಗನ್ನಿಂದ ತಲೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲೆಯ ಪೊಲೀಸ್ ಮೂಲಗಳು ದೃಢಪಡಿಸಿವೆ. ಈಚೆಗೆ ಲಾಕ್ಡೌನ್ ಸಂದರ್ಭದಲ್ಲಿ ಕುಟುಂಬ ಸಮೇತ ಊರಿಗೆ ಬಂದಿದ್ದ ಇವರು ನಂತರ ಒಬ್ಬರೇ ಛತ್ತಿಸಗಡಕ್ಕೆ ತೆರಳಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.