ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬೈಕ್ ಅಪಘಾತಕ್ಕೀಡಾಗಿ ಚಿಕಿತ್ಸೆಗೆ ಆರ್ಥಿಕ ಸಂಕಷ್ಟದಲ್ಲಿದ್ದ ಯುವಕ ಸುರತ್ಕಲ್ ಹೊಸಬೆಟ್ಟುವಿನ ಗಂಗಾಧರ್ ಅವರ ಕುಟುಂಬಕ್ಕೆ ಸುರತ್ಕಲ್ ಕುಲಾಲ ಸಂಘದ ವತಿಯಿಂದ 40 ಸಾವಿರ ರೂ. ನೆರವು ನೀಡಲಾಯಿತು.
ಸುರತ್ಕಲ್ ಹೊಸಬೆಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ರಾಮಚಂದ್ರ ಮೂಲ್ಯ ಅವರು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದು, ಇವರ ಪತ್ನಿ ಸಂಪಾ ಅವರು ಹಲವು ವರ್ಷಗಳಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ. ಈ ನಡುವೆ ಕಾಲೇಜು ಶಿಕ್ಷಣ ಪಡೆಯುತ್ತಿದ್ದ ಅವರ ಮಗ ಗಂಗಾಧರ್ ಬೈಕ್ ಅಪಘಾತದಲ್ಲಿ ಗಂಭೀರ ಏಟು ತಗುಲಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇವರ ಯೋಗಕ್ಷೇಮದ ಜೊತೆಗೆ ಮನೆ ಖರ್ಚನ್ನು ಫಿಜ್ಜಾ ಕಂಪೆನಿಯಲ್ಲಿ ಅಲ್ಪ ಸಂಬಳಕ್ಕೆ ದುಡಿಯುತ್ತಿರುವ ಅವರ ಮಗಳು ನಿಶಾ ಮೂಲ್ಯ ನೋಡಿಕೊಳ್ಳುತ್ತಿದ್ದರು. ಇವರ ಕಷ್ಟದ ಬದುಕಿನ ಕುರಿತು `ಕುಲಾಲ ವರ್ಲ್ಡ್ ಡಾಟ್ ಕಾಮ್’ ವರದಿ ಪ್ರಕಟಿಸಿ ದಾನಿಗಳಲ್ಲಿ ಧನಸಹಾಯ ನೀಡುವಂತೆ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿರುವ ಸುರತ್ಕಲ್ ಕುಲಾಲ ಸಂಘದ ಸದಸ್ಯರು ಹಣ ಸಂಗ್ರಹಿಸಿ ಜೂ.೧೨ರಂದು ಸಂತ್ರಸ್ತರ ಮನೆಗೆ ಭೇಟಿ ನೀಡಿ 40 ಸಾವಿರ ರೂ.ನ ಚೆಕ್ ಮೂಲಕ ನೆರವು ನೀಡಿ ಸಂತೈಸಿದ್ದಾರೆ.