ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಕುಲಾಲ ಸಂಘಟನೆಯಲ್ಲಿ ಗುರುತಿಸಿಕೊಂಡು ಸಮಾಜದ ಏಳಿಗೆಗೆ ನಿರಂತರ ದುಡಿದ ಮಂಜೇಶ್ವರದ ಕೊಡ್ಲಮೊಗರು ಮಡ್ವ ಮನೆಯ ರಾಮಯ್ಯ ಮೂಲ್ಯ(ಆರ್.ಎಂ ಮಡ್ವ) ಹಾಗೂ ಉಳ್ಳಾಲ ಸಮೀಪದ ಉಚ್ಚಿ ಲದ ಪಿಲಿಕೂರು ಮೂಲಸ್ಥಾನದ ಕಂಪ ಕುಟುಂಬದ ಹಿರಿಯರಾದ ಕೇಶವ ಸಂಕೊಲಿಗೆ (60) ವಿಧಿವಶರಾಗಿದ್ದಾರೆ.
ಆರ್.ಎಂ ಮಡ್ವ :
ಮಂಜೇಶ್ವರದ ಕೊಡ್ಲಮೊಗರು ಮಡ್ವ ಮನೆಯ ಆರ್.ಎಂ ಮಡ್ವ ಅಲ್ಪಕಾಲದ ಅನಾರೋಗ್ಯದಿಂದ ಮುಂಬೈಯ ಸಾಯನ್ ನಲ್ಲಿ ಕಳೆದ ಜೂ. ೧ರಂದು ನಿಧನ ಹೊಂದಿದರು. 85 ವರ್ಷದ ತುಂಬು ಜೀವನ ಜೀವಿಸಿದ ಇವರು, ಪ್ರತಿಷ್ಠಿತ ಕುಲಾಲ ಸಮಾಜದ ಹಿರಿಯ ಮುಂದಾಳುವಾಗಿ, ಈ ಕರ್ಮಭೂಮಿಯಲ್ಲಿ ಎಲ್ಲ ಕಡೆ ಹಂಚಿ ಹರಿದು ಹೋಗಿದ್ದ ತನ್ನ ಕುಲಭಾಂದವರನ್ನೆಲ್ಲಾ ಒಂದೆಡೆ ಸೇರಿಸಿ, ಅವರನ್ನು ಸಂಘಟಿತರನ್ನಾಗಿ ಮಾಡುವ ತನ್ಮೂಲಕ, ಮುಂಬೈ ನಗರದಲ್ಲಿ ಕುಲಾಲ ಸಂಘದ ಅವಿರತ ಸೇವೆ ಮಾಡಿದವರು.
ಸಂಘದಲ್ಲಿ ವಿವಿಧ ಪದವಿಗಳನ್ನು ಅಲಂಕರಿಸಿ ಬಳಿಕ ಅಧ್ಯಕ್ಷರಾಗಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಮನದಲ್ಲಿ ಯಾವತ್ತೂ ನೆನಪುಳಿಯುವ ಕಾರ್ಯವನ್ನು ಮಾಡಿ, ಆ ಸಮಾಜದ ಏಳ್ಗೆಯ ಹರಿಕಾರ ಅನ್ನಿಸಿಕೊಂಡವರಿವರು. ಜೀವನದ ಗೆಲುವಿಗಾಗಿ ಅವರು ತಾಯ್ನಾಡನ್ನು ಬಿಟ್ಟು ಈ ಮಾಯಾನಗರಿಗೆ ಬಂದು, ನಗರದ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಉನ್ನತ ಅಧಿಕಾರಿಯಾಗಿ ,ಭಾರತೀಯ ಜೀವವಿಮಾ ನಿಗಮದ ಏಜೆಂಟ್ ಆಗಿ ಆರ್ ಎಂ ಮಡ್ವ ಸೇವೆ ಸಲ್ಲಿಸಿದ್ದಾರೆ . ಕುಲಾಲ ಸಮಾಜ ಆರ್ಥಿಕವಾಗಿ ಪ್ರಬಲವಾಗಬೇಕು,ಎಲ್ಲರೂ ಸ್ವಾವಲಂಬಿಗಳಾಗಿ ಬದುಕಬೇಕು ಅನ್ನುವ ಉದ್ದೇಶದಿಂದ ಜ್ಯೋತಿ ಕೋ.ಆಪರೇಟಿವ್ ಸೊಸೈಟಿಯ ಸ್ಥಾಪನೆಯಲ್ಲಿ ಇವರು ಒಬ್ಬರು. ಈ ಸಂಸ್ಥೆಯ ಅಭಿವೃದ್ಧಿಗೆ ಬದುಕಿನ ಬಹಳಷ್ಟು ಸಮಯಗಳನ್ನು ನೀಡಿದರು. ಇಲ್ಲಿ ವಿವಿಧ ಹುದ್ದೆಗಳನ್ನು ಜವಾಬ್ದಾರಿಯಿಂದ ನಿಭಾಯಿಸಿ ಬಳಿಕ ಕಾರ್ಯದಕ್ಷರಾಗಿ ತುಂಬಾ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಸಮಾಜದ ಆರ್ಥಿಕ ಬಲವರ್ಧನೆಗೆ ಅವಿರತ ಪ್ರಯತ್ನ ಪಟ್ಟ ದೂರದೃಷ್ಟಿಯ ನಾಯಕರಿವರು.
ತನ್ನ ಜೀವಿತಾವಧಿಯ ಕೊನೆಯ ಗಳಿಗೆವರೆಗೂ ಸಮಾಜಕ್ಕಾಗಿ ಬದುಕಿದ ಸಾರ್ಥಕ ಬದುಕು ಶ್ರೀಯುತರದ್ದು. ಎಲ್ಲರ ನೋವು ನಲಿವುಗಳಲ್ಲಿ ಭಾಗಿಯಾಗಿ ಕಷ್ಟದಲ್ಲಿರುವವರಿಗೆ ಶಕ್ತಿ ಮೀರಿ ಸಹಾಯ ಹಸ್ತ ಚಾಚಿ ಅವರ ಕಣ್ಣೀರನ್ನು ಒರೆಸುವ ಮನೆಯ ಹಿರಿಯ ಮಗನಂತೆ ಇದ್ದವರಿವರು. ಕುಲಾಲ ಸಂಘ ಪ್ರಾರಂಭದ ದಿನಗಳಲ್ಲಿ ದೀಪಾವಳಿ, ದಸರಾ ಮೊದಲಾದ ಉತ್ಸವದ ಸಂದರ್ಭದಲ್ಲಿ ಸಂಘಕ್ಕಾಗಿ ದೇಣಿಗೆಯ ಸಂಗ್ರಹಣೆಗೆ ಶ್ರಮ ವಹಿಸಿದವರು. ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಲೇ ಇಷ್ಟು ವರ್ಷ ಸಾರ್ಥಕ ಬದುಕನ್ನು ಸಾಗಿಸಿದ ಇವರು ಪತ್ನಿ,ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಹಾಗೂ ಅಪಾರ ಬಂಧು ಮಿತ್ರರು ಹಿತೈಷಿಗಳನ್ನು ಅಗಲಿದ್ದಾರೆ.
ಕೇಶವ ಸಂಕೊಲಿಗೆ :
ಉಳ್ಳಾಲ ಸಮೀಪದ ಉಚ್ಛಿಲದ ಪಿಲಿಕೂರು ಮೂಲಸ್ಥಾನದ ಕಂಪ ಕುಟುಂಬಕ್ಕೆ ಹಿರಿಯ ರಾದ ಶ್ರೀ ಕೇಶವ ಸಂಕೊಲಿಗೆ (60) ಜೂನ್ 6 ರಂದು ವಿಧಿವಶರಾದರು. ಇವರು ಕುಲಾಲ ಸಂಘ ಕೊಲ್ಯದ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಅನೇಕ ಹುದ್ದೆಗಳನ್ನು ಅಲಂಕರಿಸಿ ಸಮಾಜದ ಒಳಿತಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು. ಜಾತಿಯ ಕಟ್ಟ ಕಡೆಯ ವ್ಯಕ್ತಿಗೂ ಸಂಘದ ಸೌಲಭ್ಯಗಳು ದೊರಕಬೇಕೆನ್ನುವ ಇಚ್ಛಾ ಶಕ್ತಿ ಯೊಂದಿಗೆ ಕೆಲಸ ಮಾಡುತ್ತಾ ಬಡವರ ದ್ವನಿಯಾಗಿದ್ದವರು. ವಿದ್ಯುತ್ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಪ್ರಾಥಮಿಕ ಸೇವಾಕರ್ತರಾದ ಶ್ರೀಯುತರು ಧಾರ್ಮಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡವರು. ಮುಂಬಯಿ ಕುಲಾಲ ಸಂಘದ ಸದಸ್ಯರು, ಕೋಟೆಕಾರು ಭಾರತೀಯ ಜನತಾ ಪಕ್ಷದ ಹಿರಿಯ ಕಾರ್ಯಕರ್ತರಾದ ಇವರು ಪಕ್ಷದ ಗ್ರಾಮ ಸಮಿತಿಯ ಪ್ರದಾನ ಕಾರ್ಯದರ್ಶಿ ಆಗಿದ್ದರು. ಜಾತಿ ಮತ ಬೇಧವಿಲ್ಲದೆ ಎಲ್ಲರಲ್ಲೂ ಆತ್ಮಿಯರಾಗಿ ಬದುಕಿದ ಇವರು ಅಜಾತ ಶತ್ರುವಿನಂತಿದ್ದರು..
ಕೇಶವರು ಮುಂಬೈ ಕುಲಾಲ ಸಂಘದ ಗೌರವ ಪ್ರಧಾನ ಕಾರ್ಯದರ್ಶಿಯಾಗಿರುವ ಕರುಣಾಕರ ಸಾಲ್ಯಾನ್ ಸಹೋದರ, ಸಹಿತ ತಾಯಿ,ಇಬ್ಬರು ಸಹೋದರಿಯರು, ಪತ್ನಿ, ಪುತ್ರ, ಪುತ್ರಿಯನ್ನು ಮತ್ತು ಬಂಧು ಮಿತ್ರರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.