ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸ್ವ ಉದ್ಯೋಗ ಮಾಡಿಕೊಂಡು ಮನೆ ಮಂದಿಯನ್ನು ಪೋಷಿಸುತ್ತಿದ್ದ ಯುವಕ ಉದರ ಸಂಬಂಧಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುವಂತೆ ಆತನ ಸ್ನೇಹಿತರು ದಾನಿಗಳಲ್ಲಿ ಮನವಿಕೊಂಡಿದ್ದಾರೆ.
ವಕ್ವಾಡಿಯ ನಿವಾಸಿ ಸಂತೋಷ್ ಕುಲಾಲ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಯುವಕ. ಬಡತನದಲ್ಲಿ ಹುಟ್ಟಿ, ತನ್ನ ಕಠಿಣ ಪರಿಶ್ರಮದಿಂದ ಈತ ವಕ್ವಾಡಿ ಮತ್ತು ಆಸುಪಾಸಿನ ಗ್ರಾಮಗಳಲ್ಲಿ ಪರಿಚಿತ ವ್ಯಕ್ತಿಯಾಗಿದ್ದಾನೆ. ಸುಮಾರು ಎರಡು ವರ್ಷದಿಂದ ನೋವು ಅನುಭವಿಸಿಕೊಂಡು , ತಾನೇ ತನ್ನ ಸಲುಹಿಕೊಂಡು ಕಾಯಿಲೆಗೆ ಸೆಡ್ಡು ಹೊಡೆದು ಬದುಕಿರುವ ಈತ, ಇದುವರೆಗೆ ನೆರವಿಗಾಗಿ ಇನ್ನೊಬ್ಬರ ಬಳಿ ಕೈಚಾಚಿದವನಲ್ಲ. ವಕ್ವಾಡಿಯ ಯುವ ಶಕ್ತಿ ಯುವಕ ಮಂಡಲ ಮತ್ತು ಕುಲಾಲ ಸಂಘಟನೆಗಳಲ್ಲಿ, ವಕ್ವಾಡಿಯ ಸಾರ್ವಜನಿಕ ಗಣೇಶೋತ್ಸವಗಳಲ್ಲಿ , ಸ್ಥಳೀಯವಾಗಿ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳುತ್ತಿದ್ದ ಸಂತೋಷ್ ಕುಲಾಲ್ ಸಭೆ, ಸಮಾರಂಭಗಳ ನಿರ್ವಹಣೆಯಲ್ಲೂ ಮುಂಚೂಣಿಯಲ್ಲಿದ್ದ. ಮಾತಿನ ಧಾಟಿಯಲ್ಲಿ ಎಲ್ಲರನ್ನೂ ಮೋಡಿ ಮಾಡುವ ಗುಣ ಅವನಲ್ಲಿತ್ತು. ಆದರೇ ಈಗ ದುಡಿಯಲು ಸಾಧ್ಯವಾಗದೆ ಕುಟುಂಬ ನಿರ್ವಹಣೆ ಮತ್ತು ಚಿಕಿತ್ಸೆಗೆ ಆದಾಯ ಇಲ್ಲದೆ ಇಡೀ ಕುಟುಂಬ ಸಂಕಷ್ಟ ಪಡುತ್ತಿದೆ. ಆರ್ಥಿಕವಾಗಿ ಶಕ್ತರಲ್ಲದ ಬೆಳಗಾವಿಯಲ್ಲಿದ್ದ ಆತನ ತಂಗಿ, ಭಾವ ಇದೀಗ ಆತನನ್ನು ನೋಡಿಕೊಳ್ಳುತ್ತಿದ್ದಾರೆ. ಆದುದರಿಂದ ದಾನಿಗಳು ಇವರ ಚಿಕಿತ್ಸೆ ನೆರವು ನೀಡುವಂತೆ ಮನವಿ ಮಾಡಲಾಗಿದೆ.