ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಹೊಟ್ಟೆನೋವಿಗೆ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಗೃಹಿಣಿಯೊಬ್ಬರು ಏಕಾಏಕಿ ಅಸ್ವಸ್ಥಗೊಂಡು ಮೃತಪಟ್ಟಿದ್ದು, ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಸಂಶಯ ವ್ಯಕ್ತವಾಗಿದೆ.
ಮುಂಬಯಿ ಚೆಂಬೂರಿನ ನಿವಾಸಿ ಪ್ರವೀಣ್ ಮೂಲ್ಯ ಅವರ ಪತ್ನಿ ಸುಜಾತ ಮೂಲ್ಯ(27) ಮೃತಪಟ್ಟ ಗೃಹಿಣಿ. ಇವರು ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದು 3 ದಿನಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಚಿಕಿತ್ಸೆಗಾಗಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಯ ವೈದ್ಯರು ತಕ್ಷಣ ಸುಜಾತ ಶಸ್ತ್ರಚಿಕಿತ್ಸೆ ನಡೆಸಿದ್ದರು. ಆ ಬಳಿಕ ಮೂರು ದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಮೇ. 24ರಂದು ಸಂಜೆ ಅಲ್ಲಿಂದ ಬಿಡುಗಡೆಗೊಂಡಿದ್ದರು. ಮನೆಗೆ ಆಗಮಿಸಿದ ಬಳಿಕ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಮತ್ತೆ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಆಸ್ಪತ್ರೆ ತಲುಪುವ ಹೊತ್ತಿಗೆ ಅವರು ಮೃತಪಟ್ಟಿದ್ದರು. ಸಕಾಲದಲ್ಲಿ ಆಂಬುಲೆನ್ಸ್ ದೊರಕದೇ ಇರುವುದು ಹಾಗೂ ವೈದ್ಯರು ತಡವಾಗಿ ಪರೀಕ್ಷೆ ನಡೆಸಿರುವುದು ಇವರ ಸಾವಿಗೆ ಕಾರಣ ಎನ್ನಲಾಗಿದೆ. ಸುಜಾತ- ಪ್ರವೀಣ್ ದಂಪತಿಗೆ ಎರಡು ವರ್ಷದ ಮಗ ಇದ್ದಾನೆ.