ಬೆಳಗಾವಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ರಾಯಬಾಗ ತಾಲ್ಲೂಕು ಚಿಂಚಲಿಯ ಕುಂಬಾರ ಗಲ್ಲಿಯ ಯೋಧ ಹನುಮಂತ ಕುಂಬಾರ ಅವರ ಪುತ್ರಿಯರಿಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.
ಐಶ್ವರ್ಯಾ ಕುಂಬಾರ (4) ಮತ್ತು ಜಯಶ್ರೀ ಕುಂಬಾರ (5) ಮೃತರು. ತಾಯಿ ಕವಿತಾ ಕುಂಬಾರ ಕೂಡ ಅಸ್ವಸ್ಥರಾಗಿದ್ದು, ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕವಿತಾ ಆದಾಯಕ್ಕಾಗಿ ಹೆಸರು ಕಾಳಿನ ವ್ಯಾಪಾರ ಮಾಡುತ್ತಿದ್ದರು. ‘ಹೆಸರು ಕಾಳು ಕೆಡದಿರಲೆಂದು ಕೆಮಿಕಲ್ ಲೇಪಿಸಿಟ್ಟಿದ್ದರು. ಅದರಿಂದ ವಿಷ ಗಾಳಿ ಮಂಗಳವಾರ ರಾತ್ರಿ ಕೊಠಡಿಯ ತುಂಬೆಲ್ಲಾ ಹರಡಿ ದೇಹ ಸೇರಿದೆ. ಉಸಿರಾಟಕ್ಕೆ ತೊಂದರೆಯಾಗಿದೆ. ಹಲವು ಬಾರಿ ವಾಂತಿ ಮಾಡಿಕೊಂಡು ನಿತ್ರಾಣರಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತರಾದರು’ ಎಂದು ಪ್ರಕರಣ ದಾಖಲಾಗಿದೆ.
‘ಮಕ್ಕಳ ಸಾವಿನ ಬಗ್ಗೆ ಸಂಶಯವಿದೆ’ ಎಂದು ಕವಿತಾ ದೂರಿನಲ್ಲಿ ತಿಳಿಸಿದ್ದಾರೆ. ‘ಅಸಹಜ ಸಾವು ಪ್ರಕರಣ’ ದಾಖಲಿಸಿಕೊಂಡಿರುವ ಕುಡಚಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗವಾಹಟಿಯಲ್ಲಿ ಕರ್ತವ್ಯದಲ್ಲಿರುವ ಹನುಮಂತ ಈಚೆಗೆ ರಜೆ ಮೇಲೆ ಬಂದಿದ್ದ ಕುಟುಂಬದೊಂದಿಗೆ ವಿಜಯದಶಮಿ ಆಚರಿಸಿ ಹೋಗಿದ್ದರು. ಐಶ್ವರ್ಯಾ ಮಂಗಳವಾರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಮಕ್ಕಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.