ಬಂಟ್ವಾಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಅಜೆಕಳದ ಮಹಿಳೆಯೊಬ್ಬರು ಹೆರಿಗೆಯ ಸಂದರ್ಭ ಮೃತಪಟ್ಟ ದಾರುಣ ಘಟನೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಡೆದಿದೆ. ಬಂಟ್ವಾಳ ಅಜೆಕಳ ನಿವಾಸಿ, ಉದಯ ಕುಲಾಲ್ ಎಂಬವರ ಪತ್ನಿ ಉಷಾ(29) ಮೃತಪಟ್ಟವರು.
ಉಷಾ ಅವರು ಎರಡನೇ ಹೆರಿಗೆಗಾಗಿ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಗೆ ಶನಿವಾರ ಬೆಳಗ್ಗೆ ದಾಖಲಾಗಿದ್ದರು. ಸಂಜೆಯ ವೇಳೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದರೆ ರಾತ್ರಿ 8 ಗಂಟೆಯ ಸುಮಾರಿಗೆ ಇಲ್ಲಿನ ವೈದ್ಯರು ತುರ್ತು ಚಿಕಿತ್ಸೆಯ ಕಾರಣ ನೀಡಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಉಷಾ ಅವರಿಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಈ ಸಂದರ್ಭ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ ಎಂದು ಉಷಾ ಕುಟುಂಬಸ್ಥರು ತಿಳಿಸಿದ್ದಾರೆ. ಮಗು ಆರೋಗ್ಯವಾಗಿದ್ದು, ಉಷಾ ಅವರ ಸಾವಿಗೆ ಕಾರಣವೇನು ಎಂಬುದು ಗೊತ್ತಾಗಿಲ್ಲ. ಹೀಗಾಗಿ ಈ ಬಗ್ಗೆ ಪೊಲೀಸ್ ತನಿಖೆ ನಡೆಸಬೇಕೆಂದು ಆಕೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಉಷಾ ಅವರ ಅಸಹಜ ಸಾವಿನ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.