ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ 2019-20 ಸಾಲಿನ ಅಧ್ಯಕ್ಷರಾಗಿ ಜಯರಾಜ್ ಎಸ್ ಬಂಗೇರ ಅವರು ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂ. 30ರಂದು ರಂಗೋಲಿ ಹೋಟೆಲ್ ನ ಸಭಾಂಗಣದಲ್ಲಿ ನಡೆಯಲಿದೆ.
ಹಲವು ವರ್ಷಗಳಿಂದ ರೋಟರಿ ಸಂಸ್ಥೆಯಲ್ಲಿ ಗುರುತಿಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಜಯರಾಜ್ ಅವರು ದಿ.ಸಂಜೀವ ಬಂಗೇರ ಹಾಗೂ ರಾಜೀವಿ ದಂಪತಿಗಳ ಸುಪುತ್ರ. ಈ ದಂಪತಿಗಳ ಆರು ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದ ಅವರು, ಬಾಲ್ಯದಲ್ಲಿ ತುಂಬಾ ಕಷ್ಟದ ಜೀವನ ನಡೆಸಿದರು. ಶಾಲಾ ಖರ್ಚುಗಳಿಗಾಗಿ ಮನೆ ಮನೆಗೆ ಪೇಪರ್ ಹಾಕಿ ಹಣ ಹೊಂದಿಸಿಕೊಂಡು ಬಂಟ್ವಾಳ ಎಸ್ ವಿ ಎಸ್ ಹೈಸ್ಕೂಲಿನಲ್ಲಿ ಎಸ್ಸೆಸೆಲ್ಸಿ ಮುಗಿಸಿ, ಬಳಿಕ ಉದ್ಯೋಗವನ್ನು ಅರಸಿ ಮಾಯನಗರಿ ಮುಂಬೈಗೆ ತೆರಳಿದರು. ಅಲ್ಲಿ ಹೋಟೆಲ್ ನಲ್ಲಿ ದುಡಿಯುತ್ತಾ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಎಲೆಕ್ಟ್ರೀಕಲ್ ಡಿಪ್ಲೊಮಾ ಮುಗಿಸಿದರು. ನಂತರ ನಾಸಿಕ್ ನಲ್ಲಿ ಹೋಟೆಲ್ ಉದ್ಯಮ ನಡೆಸಿ ಯಶಸ್ವಿಯಾದರು. ಈ ನಡುವೆ ಊರಿನಲ್ಲಿ ನೆಲೆನಿಲ್ಲಬೇಕೆಂಬ ವ್ಯಾಮೋಹದಿಂದ ಊರಿಗೆ ಬಂದು ಹೋಟೆಲ್ ಆರಂಭಿಸಿ, ಅದರಲ್ಲಿ ತೃಪ್ತಿ ಕಾಣದೆ ತನ್ನ ನೆಚ್ಚಿನ ಇಲೆಕ್ಟ್ರಿಕಲ್ ಉದ್ಯಮಕ್ಕೆ ಧುಮುಕಿ ತನಿಷ್ಕ್ ಎಂಟರ್ಪ್ರೈಸಸ್ ಎಂಬ ಇಲೆಕ್ಟ್ರಿಕಲ್ಸ್ ಶಾಪ್ ನ ಜೊತೆಗೆ, ಪಿ ಡಬ್ಲ್ಯುಡಿ ಗುತ್ತಿಗೆದಾರರಾಗಿ ಯಶಸ್ಸನ್ನು ಕಂಡರು. ಸಮಾಜ ಸೇವಕನಾಗಿ ತುಡರ್ ಚಾರಿಟೇಬಲ್ ಟ್ರಸ್ಟನ್ನು ಸ್ಥಾಪಿಸಿ ಅದರ ಸಂಚಾಲಕರಾಗಿ ಆಶಕ್ತ ಬಡವರ ಕಣ್ಣು ಒರೆಸುವ ಕೆಲಸ ಮಾಡುತ್ತಿದ್ದಾರೆ. ಬಂಟ್ವಾಳ ತಾಲೂಕು ಸಂಘ ಕುಲಾಲ ಯುವ ವೇದಿಕೆಯಲ್ಲೂ ಗುರುತಿಸಿಕೊಂಡು ದೊರೆತ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಪತ್ನಿ ಮನೀಷಾ ಹಾಗೂ ಪುತ್ರಿಯರಾದ ತನಿಷ್ಕಾ ಮತ್ತು ತಶ್ವಿಕರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
-ನಾರಾಯಣ್ ಸಿ ಪೆರ್ನೆ