ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ತುತ್ತಿನ ಚೀಲ ತುಂಬಿಸಿಕೊಳ್ಳಲು ಕುಟುಂಬಕ್ಕೆ ಆಧಾರವಾಗಿರುವ ಬಡ ಕೂಲಿ ಕಾರ್ಮಿಕರೊಬ್ಬರು ಕಾಲು ಮುರಿತಕ್ಕೊಳಗಾಗಿ ಆಸ್ಪತ್ರೆ ಪಾಲಾಗಿದ್ದು, ಕುಟುಂಬ ನಿರ್ವಹಣೆ ಮತ್ತು ಚಿಕಿತ್ಸೆ ವೆಚ್ಚ ಹೊಂದಿಸಲಾಗದೆ ಪರದಾಡುತ್ತಿದ್ದಾರೆ.
ಬೆಳ್ತಂಗಡಿ ತಾಲೂಕು ಶಿರ್ಲಾಲು ಸಮೀಪದ ಸುಲ್ಕೇರಿಮೊಗ್ರು ಪೊರಿಂಜ ಎಂಬಲ್ಲಿಯ ನಿವಾಸಿ ತಿಮ್ಮಪ್ಪ ಕುಲಾಲ್ (45) ಅವರು ಅಡಿಕೆ ಕೀಳುವ ಉದ್ಯೋಗ ಮಾಡುತ್ತಿದ್ದು, ಮೂರು ತಿಂಗಳ ಹಿಂದೆ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಇವರ ಬಲಗಾಲು ಮುರಿತಕ್ಕೊಳಗಾಗಿತ್ತು. ಇದರ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ಇದಕ್ಕೆ ಸರ್ಜರಿ ನಡೆಸಲಾಗಿತ್ತು. ಇದಕ್ಕಾಗಿ ಸುಮಾರು ಇವರು ದುಡಿದ ಒಂದು ಲಕ್ಷ ರೂ. ಖರ್ಚು ಮಾಡಲಾಗಿತ್ತು. ಇನ್ನೇನು ಕಾಲು ಗುಣಮುಖವಾಗಿ ದುಡಿಯಲು ಹೋಗಬಹುದೆಂಬ ನಿರೀಕ್ಷೆಯಲ್ಲಿದ್ದ ಇವರಿಗೆ ಮತ್ತೊಂದು ಆಘಾತವಾಗಿದೆ. ಕಾಲು ಗುಣವಾಗುವ ಬದಲು ದಿನೇ ದಿನೇ ಬಾವು ಕಾಣಿಸಿಕೊಂಡು ನೋವು ಉಲ್ಪಣಿಸಿದ್ದು, ಪರೀಕ್ಷೆ ಮಾಡಿದಾಗ ಇದಕ್ಕೆ ಮತ್ತೆ ಸರ್ಜರಿ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಚಿಕಿತ್ಸೆಗೆ ಮತ್ತೆ ಒಂದೂವರೆ ಲಕ್ಷ ರೂ. ವೆಚ್ಚವಾಗಬಹುದೆಂದು ಅಂದಾಜಿಸಿದ್ದಾರೆ. ಒಂದೆಡೆ ಕಾಲು ನೋವಿನ ಚಿಕಿತ್ಸೆ, ಇನ್ನೊಂದೆಡೆ ಕುಟುಂಬ ನಿರ್ವಹಣೆಗೆ ಹಣವಿಲ್ಲದೆ ತಿಮ್ಮಪ್ಪ ಅವರ ಕುಟುಂಬ ತೊಂದರೆ ಎದುರಿಸುತ್ತಿದ್ದು, ದಾನಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ.
ಅಡಿಕೆ ಕೀಳುವ ಉದ್ಯೋಗ ಬಿಟ್ಟರೆ ಬೇರೆ ಆದಾಯವಿಲ್ಲದ ಅವರಿಗೆ ಪತ್ನಿ ಮತ್ತು ಶಾಲೆಗೆ ಹೋಗುವ ಒಂದು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳಿದ್ದು, ಈ ಕುಟುಂಬ ಆರ್ಥಿಕವಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಮುಂದಿನ ದಿಕ್ಕು ಕಾಣದೆ ಚಿಂತೆಯಲ್ಲಿದ್ದಾರೆ. ಬಡ ಕುಟುಂಬಕ್ಕೆ ಸರಕಾರದ ವತಿಯಿಂದ ಹಲವಾರು ಯೋಜನೆಗಳಿದ್ದರೂ ಅವುಗಳು ಅರ್ಹ ಫಲಾನುಭವಿಗಳಿಗೆ ಸೂಕ್ತ ಸಮಯಕ್ಕೆ ಕೈಗೆಟಕುತ್ತಿಲ್ಲ. ಹೀಗಾಗಿ ಹೃದಯವಂತ ದಾನಿಗಳು ತಿಮ್ಮಪ್ಪ ಅವರ ಸಂಕಷ್ಟಕ್ಕೆ ಮಾನವೀಯ ನೆಲೆಯಲ್ಲಿ ಸ್ಪಂದಿಸುವರೆಂಬ ಭರವಸೆಯಲ್ಲಿದ್ದಾರೆ. ಸಹಾಯ ಮಾಡಲಿಚ್ಛಿಸುವವರು ಈ ಕೆಳಗಿನ ಖಾತೆಗೆ ಹಣ ಕಳಿಸಿ ಸಹಕರಿಸಿರಿ.
Name : Thimmappa
S/o Sheena Moolya
Bank : Karnataka Bank Ltd.
SB A/c No: 0152500101314001
IFSC : KARB 0000015
Branch : Aladangady, Belthangady tq. phone : 9164241635