ಬೆಂಗಳೂರು(ಜ.೦೪, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಅಖಿಲ ಕರ್ನಾಟಕ ಕುಂಭೇಶ್ವರ ಸೇವಾ ಟ್ರಸ್ಟ್ ವತಿಯಿಂದ ಜನವರಿ 6 ಭಾನುವಾರದಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಕುಂಬಾರ ಬಾಂಧವರ ವಧು ವರರ ಅನ್ವೇಷಣಾ ಸಮಾವೇಶ ಹಾಗೂ ಕುಂಭ ಉದಯ ಪತ್ರಿಕೆ ಪುನರ್ ಬಿಡುಗಡೆ ಏರ್ಪಡಿಸಿದೆ. ಮಧ್ಯಾಹ್ನದ ಬಳಿಕ ಕರ್ನಾಟಕ ರಾಜ್ಯ ಕುಂಬಾರ ಸಮಾಜದ ಕಾರ್ಯಕಾರಿಣಿ ಸಭೆ ಕೂಡ ಇಲ್ಲಿ ನಡೆಯಲಿದೆ.
ಈ ಸಮಾವೇಶದಲ್ಲಿ ರಾಜ್ಯದ ಎಲ್ಲಾ ಕುಂಬಾರ ಬಂಧುಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಸಮಾವೇಶಕ್ಕೆ ಬರುವಾಗ ವಧು-ವರರ ಪೋಸ್ಟ್ ಕಾರ್ಡ್ ಅಳತೆಯ ಭಾವಚಿತ್ರ, ವಿಳಾಸ, ದೂರವಾಣಿ ಸಂಖ್ಯೆ, ವಿದ್ಯಾಭ್ಯಾಸ, ಉದ್ಯೋಗದ ವಿವರಗಳು ಮತ್ತು ಉಪ ಪಂಗಡದ ವಿವರಗಳೊಂದಿಗೆ ಆಗಮಿಸಿ, ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಕೊಡಬೇಕಾಗಿದೆ. ಈ ಸಮಾವೇಶದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಭಾಗವಹಿಸುವ ಸಮಾಜ ಬಾಂಧವರಿಗೆ ಭೋಜನ ವ್ಯವಸ್ಥೆ ಇರುತ್ತದೆ. ಈ ಸಮಾವೇಶಕ್ಕೆ ವಧು-ವರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಮಾವೇಶದ ಉಪಯೋಗವನ್ನು ಪಡೆದುಕೊಂಡು ಬಾಂಧವ್ಯ ಬೆಸೆಯಬೇಕೆಂದು ಅಖಿಲ ಕರ್ನಾಟಕ ಕುಂಭೇಶ್ವರ ಸೇವಾ ಟ್ರಸ್ಟ್ ನ ಪ್ರಮುಖರು ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಪ್ರದೀಪ್ (6361791665) ಶಂಕರ್ (8147345535) ಅವರನ್ನು ಸಂಪರ್ಕಿಸಬಹುದು.