ಇ ವತ್ತೇಕೋ ಚಿನ್ನು ಮತ್ತೆ ನೆನಪಾಗಿದ್ದಳು. ಮಲೆನಾಡ ದಡದಿಂದ ಆ ಮುಗ್ಧ ಮನದ ಮಧುರ ಭಾವ ಹೊತ್ತು ತಂದಿದ್ದ ಪತ್ರವೂ ಅವಳ ನೆನಪಿನ ಹಿಂದೆಯೇ ಮೆತ್ತಗೆ ತೆರೆದು ಕೊಂಡಿತು. ಗದ್ದದ ಮೇಲೆ ಕೈಯಿಟ್ಟು ಕುಳಿತು ಮಂದಹಾಸ ಬೀರುವ ಕನಸು ಕಂಗಳ ಚೆಲುವೆ ಚಿನ್ನುವಿನ ಫೋಟೋ ನನ್ನನ್ನು ಅಣಕವಾಡಿದಂತಾಗಿ ಕಣ್ಣಂಚು ಮಂಜಾಯಿತು. ಪತ್ರದ ಹಿಂಬದಿಯಲ್ಲಿ ದುಂಡನೆ ಮೊಟ್ಟೆಯಾಕಾರದಲ್ಲಿ ಸ್ಪುಟವಾಗಿ ಬರೆದಿದ್ದ “ಚಿನ್ನು ಕೊಪ್ಪ” ಎಂಬ ನಾಲ್ಕಕ್ಷರ ನನ್ನ ಕಳೆದ ನಲವತ್ತು ಸಂವತ್ಸರ ಅದೆಷ್ಟರ ಮಟ್ಟಿಗೆ ಕಾಡುತ್ತಿತ್ತು ಎಂದರೆ ನೆನಪುಗಳನ್ನೆಲ್ಲ ಅಕ್ಷರಗಳಾಗಿ ಮತ್ತೆ ಹರವಿಕೊಳ್ಳುವಷ್ಟು…
ಆಗಿನ್ನೂ ಮೊಬೈಲ್ ಯುಗದ ದಶಕದ ಹಿಂದಿನ ಮಾತು. ಯೌವನದ ತಿಳಿಬಾನಿಗೆ ಸವಿಗನಸಿನ ಬೆಳ್ಮುಗಿಲು ಮುತ್ತಿಕ್ಕುವ ಹರೆಯವೆಂಬ ಮರೆಯದ ಸಂಭ್ರಮದ ಆ ದಿನಗಳು. ಬರೆದು ಬದುಕುವ ನನ್ನ ಬಯಕೆಗೆ ಬಾಲ್ಯದ ಅಭಿರುಚಿಯೇ ಪೂರಕವಾದಂತೆ ಸಾಗುತಿದ್ದ ಪುಸ್ತಕದ ಅತೀ ಪ್ರೀತಿಯು ಹೊಸ ಗೆಳೆತನದ ಕೊಂಡಿಯೊಂದ ಬೆಸೆದಿತ್ತು.
ಬದುಕೇ ಹೀಗೇ..
ಕನಸುಗಳ ಸಂತೇ
ನೆನಪುಗಳ ಕಂತೇ
ಸ್ನೇಹದಾ ಹೆಜ್ಜೆಗೆ ನಿಮ್ಮ ಜೊತೆಯುಂಟೇ..
ಪಾಕ್ಷಿಕವೊಂದರಲ್ಲಿ ಸ್ನೇಹ ಬಯಸಿ ನೀಡಿದ ವಿಳಾಸಕ್ಕೊಂದು ನನ್ನ ಈ ನಾಲ್ಕು ಸಾಲಿನ ಸ್ನೇಹವರಸಿ ಬರೆದ ಪತ್ರಕ್ಕೆ ಬಂದ ಪ್ರತಿಕ್ರಿಯೆ ಅಧ್ಭುತವಾಗಿತ್ತು. ” ಸಾಹಿತ್ಯ ಅಂದ್ರೇ ಏನು ಅಂತ ಕೇಳಿದ್ರೇ ಪಕ್ಕದ್ಮನೆ ಹುಡ್ಗೀ ಸರ್ ಅನ್ನೋ ಈ ಕಾಲದಲ್ಲಿ ನಿಮ್ಮ ಕಾವ್ಯ ಶೈಲಿಯ ಪತ್ರ ನನಗೆ ಬಂದಿದ್ದ ಹಲವಾರು ಪತ್ರಗಳಲ್ಲಿ ಮೊದಲನೆಯದಾಗಿ ನನ್ನ ಮನಸ್ಸನ್ನು ಗೆದ್ದಿತು. ಕಡಿಮೆ ಮಾತು ಮತ್ತು ವಿರಳ ಗೆಳತಿಯರ ಹೊಂದಿದ ನನಗೆ ಒಬ್ಬ ಗೆಳೆಯ ಅಂತ ಇದ್ದರೆ ಆ ಪದಕ್ಕೆ ಅರ್ಹ ವ್ಯಕ್ತಿ ನೀವು ಅಂತ ತೀರ್ಮಾನಿಸಿ ಮರು ಪತ್ರ ಬರೆಯುತಿರುವೆ. ಸ್ನೇಹದ ದೋಣಿಗೆ ಕಾಲಿಟ್ಟಿರುವ ನಾವು ಜೀವನ ಸಾಗರ ದಾಟುವ ತನಕ ಸ್ನೇಹಿತರಾಗಿರುವ ಇಚ್ಛೆ ನಿಮಗಿದ್ದರೆ ಮರು ಪತ್ರ ಬರೆಯಿರಿ. ಚಿನ್ನು ಕೊಪ್ಪ”. ಮತ್ತೆ ಮತ್ತೆ ಪತ್ರ ಬಿಡಿಸಿ ಓದಿದ್ದೇ ಓದಿದ್ದು. ಸಂತಸದ ಮನ ತಣಿಯುವಷ್ಟು.
ಮತ್ತೆಂದೂ ವಿರಮಿಸದೆ ಸಾಗಿದ ನಮ್ಮ ಪತ್ರಗೆಳೆತನಕ್ಕೆ ಈಗ ಪ್ರಥಮ ವಾರ್ಷಿಕೊತ್ಸವದ ಸಂಭ್ರಮ. ಈ ಮಧ್ಯೆ ನಮ್ಮೊಳಗೆ ಹರಿದಾಡಿದ ಹಲವಾರು ಪತ್ರಗಳಲ್ಲಿ ಮಲೆನಾಡಿನ ಚೆಲುವೆಲ್ಲಾ ತುಂಬಿ ಕಳುಹಿಸುತಿದ್ದ ಚಿನ್ನು. ಒಂದೊಂದು ಬಾರಿ ಮಲೆನಾಡಿನ ಬಂದೂಕಿನ ಸದ್ದುಗಳ ಬಗ್ಗೆಯೂ ಬೆರಗಿನಿಂದ ವಿವರಿಸುತಿದ್ದಳು. ಮತ್ತೊಂದು ಬಾರಿ ತನ್ನ ಮದುವೆಯ ಬಗ್ಗೆ ಮನೆಯಲ್ಲಿ ನಡೆದ ಮಾತುಕತೆ, ವರನ ಕಡೆಯವರು ಬಂದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದ್ದಳು. ಕೊನೆಗೊಂದು ಬಾರಿ ನಮ್ಮ ಭೇಟಿಯ ಆಶಯ ವ್ಯಕ್ತಪಡಿಸಿ ಅದಕ್ಕೊಂದು ಶುಭ ದಿನವಾಗಿ ನಮ್ಮ ಸ್ನೇಹಕ್ಕೆ ನಾಂದಿಯಾದ ದಿನವನ್ನೇ ಆರಿಸಿದ್ದಳು.
ವಾಸ್ತವದಲ್ಲಿ ಚಿನ್ನುವಿಗೂ ನನಗೂ ಇದ್ದ ಊರಿನ ಅಂತರ ಕೇವಲ ಮೂವತ್ತು ಕಿಲೋಮೀಟರ್ ದೂರ ಅಷ್ಟೇ. ಆದರೆ ವೃತ್ತಿ ಜೀವನದ ಅನಿವಾರ್ಯತೆಯು ನನ್ನನ್ನು ನನ್ನವರಿಂದ ಸಾವಿರ ಮೈಲಿ ದೂರದಲ್ಲಿರಿಸಿತ್ತು. ಈ ಬಾರಿ ಎಂದೂ ಮುಖತಃ ಭೇಟಿಯಾಗದ ಸ್ನೇಹಿತೆಯ ಕಾಣಲು ಅಮಿತ ಉತ್ಸಾಹದಿಂದ ಹೊರಟಿದ್ದೆ. ತಲುಪ ಬೇಕಿದ್ದ ನಿರ್ದಿಷ್ಟ ಸ್ಥಳದ ಮಾಹಿತಿ ನೀಡಿದ್ದ ಚಿನ್ನುವಿನ ಪತ್ರವನ್ನು ಮತ್ತೊಮ್ಮೆ ಬಿಡಿಸಿದೆ. “ನಮ್ಮ ಹಳ್ಳಿ ನಗರಕ್ಕೆ ಹತ್ತಿರವಾಗಲು ಬಹಳ ವರ್ಷ ತಗುಲಬಹುದು. ಒಂದು ಬಸ್ಸು ದಿನಕ್ಕೆರಡು ಬಾರಿ ಬಂದು ಹೋಗುವಷ್ಟೇ ನಮ್ಮೂರಿನ ಸಾರಿಗೆ ಸೌಕರ್ಯ. ಸಮಯ ಹೊಂದಿಸಿ ಮೂರುವರೆಯ ಸಾರಿಗೆ ಬಸ್ಸೀಗೇ ಬಂದುಬಿಡಿ. ನಿಮ್ಮ ಸ್ವಾಗತಕ್ಕೆ ದಿನವೊಂದರ ಮೊದಲಾಗಿ ಬಂದು ನಾ ಕಾದಿರುವೆ ಅಜ್ಜಿ ಮನೆಯಲ್ಲಿ”. ಇಳಿಯಬೇಕಾದ ಸ್ಥಳದ ಹೆಸರನ್ನು ಎರಡೆರಡು ಬಾರಿ ಬರೆದಿದ್ದಳು.
ಚಿನ್ನುವನ್ನು ಕಾಣುವ ಸಂಭ್ರಮದಿಂದ ಊರು ತಲುಪಿದ್ದೇನೋ ಸರಿ. ಆದ್ರೇ ದಿಢೀರ್ ಕೈ ಕೊಟ್ಟ ಮಾವನವರ ಅರೋಗ್ಯ ನಮ್ಮೆಲ್ಲಾ ಯೋಜನೆಯನ್ನು ಬುಡಮೇಲುಗೊಳಿಸಿತ್ತು. ನನ್ನ ಬದುಕಿಗೆ ಭದ್ರ ಬುನಾದಿ ಹಾಕಿದ ಮಾವನವರಲ್ಲಿ ಗೌರವ ಪ್ರೀತಿಯಲ್ಲದೆ ಅವರ ಋಣಭಾರವು ನನ್ನ ಮೇಲಿತ್ತು. ಅನಿವಾರ್ಯವಾಗಿ ಮಾವನ ಆರೈಕೆಗೆ ಎರಡು ದಿನ ಆಸ್ಪತ್ರೆ ಮನೆಯ ನಡುವಿನ ನನಗೆ ಓಡಾಡ ಬೇಕಾಯಿತು. ಈ ಮಧ್ಯೆ ನಮ್ಮ ಬೇಟಿಯ ಆ ಮಹತ್ವದ ದಿನ ಸದ್ದಿಲ್ಲದೆ ಕರಗಿ ಹೋದಾಗ ಚಿನ್ನುವಿನ ನಿರೀಕ್ಷೆ ನಂತರದ ನಿರಾಸೆಯ ಕಲ್ಪನೆಯಲ್ಲೇ ನನ್ನ ಹೃದಯ ಹಿಂಡಿತು.
ಎರಡು ದಿನಗಳ ನಂತರ ಚಿನ್ನುವನ್ನು ಸಂತೈಸುವುದು ಹೇಗಪ್ಪಾ ಎನ್ನುವ ಯೋಚನೆಯಲ್ಲೇ ಬಸ್ಟ್ಯಾಂಡ್ ತಲುಪಿದವನಿಗೆ ಎಲ್ಲೋ ಸೂತಕದ ಮನೆ ಹೊಕ್ಕಂತ ಅನುಭವ. ಹಲವಾರು ಭಯ ಆತಂಕದ ಕಣ್ಣುಗಳ ಎದುರುಗೊಂಡಾಗ ಸಹಜವಾಗಿಯೇ ಏನೋ ಆಗ ಬಾರದ್ದು ಆಗಿದೆ ಅನ್ನೋ ಸಂಶಯ ಬಲವಾಗ ತೊಡಗಿತು. ಆ ಸಂಶಯಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದು ಸಾಲು ಸಾಲಾಗಿ ನಿಂತಿದ್ದ ನಾಲ್ಕಾರು ನಕ್ಸಲ್ ನಿಗ್ರಹ ಪಡೆಯ ವಾಹನಗಳು. ವಿಚಾರಿಸುವ ಕುತೂಹಲದಿಂದ ಪರಿಚಯದ ಮುಖಗಳಿಗಾಗಿ ಹುಡುಕಾಡುವಾಗ ದೃಷ್ಟಿ ಅನಿರೀಕ್ಷಿತವಾಗಿ ಪೇಪರ್ ಸ್ಟಾಲ್ ಮೇಲೆ ಹರಿಯಿತು. ಚಿಲ್ಲರೆಗಾಗಿ ಜೋಬನ್ನು ತಡಕಾಡಿ ಪೇಪರ್ ಕೈಗೆತ್ತಿಕೊಂಡೆ.
ಮುಖಪುಟದಲ್ಲೆ ದಪ್ಪ ಅಕ್ಷರದಲ್ಲಿ “ನಕ್ಸಲ್ ನಿಗ್ರಹ ಪಡೆಯ ಕ್ಷಿಪ್ರ ದಾಳಿ” “ಮನೆಯೊಂದರಲ್ಲಿ ಅಡಗಿದ್ದ ಇಬ್ಬರು ನಕ್ಸಲರ ಸಹಿತ ಐದು ಬಲಿ” ಎಂಬ ತಲೆಬರಹದ ಕೆಳಗಿತ್ತು ವಿವರಣೆ. ಕಾಡಂಚಿನ ಮನೆಯೊಂದರಲ್ಲಿ ನಕ್ಸಲರು ಅವಿತಿದ್ದಾರೆ ಅನ್ನುವ ಮಾಹಿತಿ ಪಡೆದು ಆ ಮನೆಯನ್ನು ಸುತ್ತುವರಿದ ನಕ್ಸಲ್ ನಿಗ್ರಹ ದಳ. ಶರಣಾಗಲು ನೀಡಿದ ಸೂಚನೆಯನ್ನು ಧಿಕ್ಕರಿಸಿದ ನಕ್ಸಲರು ನಡೆಸಿದ ದಾಳಿಗೆ ಪ್ರತಿ ದಾಳಿ. ಗುಂಡಿನ ಚಕಮಕಿ ಗೆ ಮನೆಯ ಅಮಾಯಕ ಮೂವರು ಮಂದಿಯ ಸಹಿತ ಇಬ್ಬರು ನಕ್ಸಲರ ಸಾವು.
ಕೆಳಗಡೆ ಸಾಲಾಗಿ ಮೃತ ದೇಹಗಳ ಫೋಟೋ ಮತ್ತು ಹೆಸರು ನೀಡಲಾಗಿತ್ತು. ರಾಮಪ್ಪ( ೫೮) ನಿಂಗಮ್ಮ( ೫೦) ಸುರೇಖಾ ಅಲಿಯಾಸ್ ಚಿನ್ನು (೨೦) ನಕ್ಸಲರ ಮಾಹಿತಿ ದೊರೆತಿಲ್ಲ. ರಕ್ತಸಿಕ್ತವಾದ ಕಳೇಬರದ ಫೋಟೋ ಒಂದರ ಒಳಚಿತ್ರಕ್ಕೂ ಚಿನ್ನುವಿಗೂ ಫೋಟೋಗೂ ಸಾಮ್ಯತೆ ಇದ್ದಂತೆ ಕಂಡು ಮತ್ತೊಮ್ಮೆ ಸರಿಯಾಗಿ ಗಮನಿಸಿದೆ. ಪತ್ರಿಕೆ ಹಿಡಿದ ಕೈಯಲ್ಲಿ ಸಣ್ಣಗೆ ನಡುಕ ಸುರುವಾಯಿತು. ಮೈ ಬೆವೆತು ಹೃದಯ ಬಡಿತ ಜೋರಾಯಿತು. ಗಂಟಲು ಉಬ್ಬಿ ಬಂದು ಮಾತು ಮೌನವಾಯಿತು. ಕಣ್ಣಂಚಲಿ ನೀರಾಡಿ ದೃಷ್ಟಿ ಮಂಜಾಯಿತು. ನಿಂತ ನೆಲವೇ ಗಿರಗಿರನೆ ತಿರುಗಿದಂತಾಗಿ ಆಸರೆಗಾಗಿ ಸಿಮೆಂಟ್ ಬೆಂಚನ್ನು ಭದ್ರವಾಗಿ ಹಿಡಿದು ಕುಳಿತುಬಿಟ್ಟೆ.
ಒಂದು ಆಘಾತ ಇನ್ನಿಲ್ಲದ ನೋವು ತಾಸುಗಟ್ಟಲೆ ಕುಳಿತಲ್ಲೇ ಶಿಲೆಯಾಗಿದ್ದೆ. ಯಾಕೆ..? ಏನು? ಎನ್ನುವ ನನ್ನ ಯಕ್ಷ ಪ್ರಶ್ನೆಗೆ ಸಿಕ್ಕ ಉತ್ತರ ನನ್ನನ್ನು ಬದುಕು ಪೂರಾ ಕೊರಗುವಂತೆ ಮಾಡಿತು. ಮಾವನ ಅನಾರೋಗ್ಯದಿಂದ ಕ್ಲಪ್ತ ಸಮಯದಲ್ಲಿ ಚಿನ್ನುವನ್ನು ಭೇಟಿಯಾಗಲು ಆಗಲಿಲ್ಲ. ನನ್ನನ್ನು ಕರೆದುಕೊಂಡು ಹೋಗಲು ಅಜ್ಜಿ ಮನೆಗೆ ಬಂದು ಕಾದಿದ್ದ ಚಿನ್ನು ನಾನು ಬರಲಿಲ್ಲ ಅನ್ನುವ ಕಾರಣಕ್ಕೆ ಆ ರಾತ್ರಿಯಲ್ಲಿ ಆಜ್ಜಿ ಮನೆಯಲ್ಲಿಯೇ ಉಳಕೊಂಡಳು. ಕಾಡಂಚಿನ ಮನೆ ಅದು ಒಂದೊತ್ತಿನ ಊಟಕ್ಕೋ ತಮಗೆ ಬೇಕಾದ ಅಡುಗೆ ಸಾಮಾನಿಗೋ ಬಂದ ನಕ್ಸಲರ ಮೇಲೆ ನಡೆದ ದಾಳಿಯು ಮೂರು ಮುಗ್ಧ ಜೀವಗಳ ಬಲಿ ಪಡೆದಿತ್ತು. ಬಹುಷಃ ನಾನು ಅವತ್ತು ಚಿನ್ನುವನ್ನು ಭೇಟಿಯಾಗಿದ್ದರೆ ಚಿನ್ನುವಿನ ಮನೆಗೆ ನಾವು ಒಟ್ಟಿಗೆ ಹೋಗುತಿದ್ದೆವು. ಆದರೆ ನನ್ನಿಂದಾದ ಚಿಕ್ಕ ಪ್ರಮಾದಕ್ಕೆ ನಾ ತೆತ್ತ ಬೆಲೆ ಚಿನ್ನುವಿನ ಪ್ರಾಣ. ಪ್ರಾಣ ಸ್ನೇಹಿತೆಯ ಪ್ರಾಣ ಹರಣಕ್ಕೆ ಹೇತುವಾದ ಸ್ನೇಹದ ಈ ದುರಂತ ಕಥನ ಬದುಕಿನ ಪ್ರತಿ ಕ್ಷಣವು ಕಾಡುತಿದೆ ಮಗ್ಗುಲ ಮಳ್ಳಿನಂತೆ. (ಸಾಂದರ್ಭಿಕ ಚಿತ್ರ ..ಮೇಲೆ ಪ್ರಕಟಿಸಲಾದ ಚಿತ್ರಕ್ಕೂ ಕಥೆಗೂ ಸಂಬಂಧವಿಲ್ಲ..)